ಕೊಪ್ಪಳ:– ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ಜರುಗಿದೆ.
ಮೃತ ಈರಪ್ಪ, ಮೇಕೆಗಳನ್ನು ಮೇಯಿಸಿಕೊಂಡು ಇಡೀ ಕುಟುಂಬವನ್ನ ತಾನೇ ಸಾಕುತ್ತಿದ್ದ. ನಿನ್ನೆ ತನ್ನ ಮೇಕೆಗಳನ್ನು ಹೊಡೆದುಕೊಂಡು, ಗ್ರಾಮದ ಹೊರವಲಯಕ್ಕೆ ಹೋಗಿದ್ದ ಈರಪ್ಪ, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಆದರೆ, ಈರಪ್ಪನ ಮೇಕೆಗಳು ಮನೆಗೆ ಬಂದಿದ್ದವು. ಈ ಹಿನ್ನಲೆ ಕುಟುಂಬದವರು ಮತ್ತು ಗ್ರಾಮಸ್ಥರು ಈರಪ್ಪನಿಗಾಗಿ ನಿನ್ನೆ ಸಂಜೆಯಿಂದ ಹುಡುಕಾಟ ನಡೆಸಿದ್ದರು. ಆದ್ರೆ, ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಈರಪ್ಪ, ಗ್ರಾಮದ ಹೊರವಲಯದಲ್ಲಿರುವ ಮರದ ಕೆಳಗೆ ಶವವಾಗಿ ಪತ್ತೆಯಾಗಿದ್ದ. ಕೃಷಿ ಜಮೀನಿನಲ್ಲಿರುವ ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿದ ಪರಿಣಾಮ, ಈರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ.
ತನ್ನ ಮೇಕೆಗಳಿಗೆ ತಪ್ಪಲು ಹಾಕುವ ಉದ್ದೇಶದಿಂದ ಬನ್ನಿ ಮರವೇರಿದ್ದ ಈರಪ್ಪ, ಟೊಂಗೆಗಳನ್ನು ಕತ್ತರಿಸಿದ್ದ. ಆದ್ರೆ, ಟೊಂಗೆಗಳ ಸಮೀಪವೇ ಇದ್ದಿದ್ದ ಹೈಟೆನ್ಷನ್ ವೈಯರ್ಗೆ ಟೊಂಗೆಗಳು ಟಚ್ ಆಗಿದ್ದರಿಂದ, ವಿದ್ಯುತ್ ಪ್ರವಹಿಸಿ, ಈರಪ್ಪ ಮರದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೀಗಾಗಿ ಈರಪ್ಪನ ಸಾವಿಗೆ ವಿಂಡ್ ಪವರ್ ಕಂಪನಿ ಕಾರಣ ಎಂದು ಕುಟುಂಬದವರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.