ಬೆಂಗಳೂರು:- ಮೊಟ್ಟೆ ದರ ಏರಿಕೆಯಿಂದ ಸರ್ಕಾರಿ ಶಾಲೆ ಶಿಕ್ಷಕರು ಕಂಗೆಟ್ಟಿದ್ದು, ಹೆಚ್ಚುವರಿ ಹಣಕ್ಕೆ ಶಿಕ್ಷಕರ ಜೇಬಿಗೇ ಕತ್ತರಿ ಬೀಳುತ್ತಿದೆ.
ಶಾಲಾ ಮಕ್ಕಳು ಪೌಷ್ಟಿಕತೆಯಿಂದ ಬೆಳೆಯಲಿ ಎಂದು ರಾಜ್ಯ ಸರ್ಕಾರ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿದೆ. ಆದರೆ ಮೊಟ್ಟೆ ದರ ಏರಿಕೆ ಯಿಂದ ಶಾಲಾ ಶಿಕ್ಷಕರು ಕಂಗಾಲಾಗಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದ್ದು, ಇದಕ್ಕಾಗಿ ನಿರ್ದಿಷ್ಟ ದರ ನಿಗದಿಪಡಿಸಲಾಗಿದೆ. ಆದರೆ ಇದೀಗ ಮೊಟ್ಟೆ ದರ ಹೆಚ್ಚಾಗಿರುವುದರಿದ, ಆ ಹೆಚ್ಚುವರಿದರವನ್ನು ಶಿಕ್ಷಕರೇ ಭರಿಸಬೇಕಾದ ಪರಿಸ್ಥಿತಿ ಇದೆ. ಇದು ಸರ್ಕಾರಿ ಶಾಲೆ ಶಿಕ್ಷಕರ ಸಂಕಷ್ಟಕ್ಕೆ ಕಾರಣವಾಗಿದೆ.
ಈ ಹಿಂದೆ ಮೊಟ್ಟೆಯ ದರ 5.30 ರೂಪಾಯಿಯಷ್ಟಿದ್ದರೆ ಕಳೆದ ಮೂರು ನಾಲ್ಕು ತಿಂಗಳುಗಳಲ್ಲಿ 6 ರೂಪಾಯಿಯಿಂದ 6.80 ರೂಪಾಯಿ ವರೆಗೆ ಏರಿಕೆಯಾಗಿದೆ. ಆದರೆ ಶಾಲಾ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗೆ ಪ್ರತಿ ಮೊಟ್ಟೆ ಖರೀದಿಗೆ 6 ರೂಪಾಯಿ ದರ ನಿಗದಿ ಮಾಡಿದೆ. ಹೀಗಾಗಿ ಇದಕ್ಕಿಂತ ಹೆಚ್ಚಿನ ಬೆಲೆ ತೆತ್ತು ಮೊಟ್ಟೆ ಖರೀದಿಸುವುದಾದಲ್ಲಿ ಆ ಹೆಚ್ಚುವರಿ ದರವನ್ನು ಶಾಲಾ ಮುಖ್ಯೋಪಾಧ್ಯಾಯರು ನೀಡಬೇಕಾಗುತ್ತದೆ.
ಇಷ್ಟೇ ಅಲ್ಲದೆ, ಮೊಟ್ಟೆ ಬೇಯಿಸುವುದಕ್ಕೆ ಕೂಡ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಮೊಟ್ಟೆ ಖರೀದಿಸಲಾಗದೆ ಸರ್ಕಾರಿ ಶಾಲೆ ಶಿಕ್ಷಕರು ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಹಲವೆಡೆ ಮೊಟ್ಟೆ ಖರೀದಿಗಾಗಿ ಶಿಕ್ಷಕರು ದಾನಿಗಳ ಮೊರೆ ಹೋಗುತ್ತಿದ್ದಾರೆ.
ಇತ್ತೀಚೆಗೆ ಅಜೀಂ ಪ್ರೇಮ್ ಜಿ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಂಡು ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ನೀಡುತ್ತಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್ ನಿಂದ 1500 ಕೋಟಿ ರೂಪಾಯಿ ಅನುದಾನ ಪಡೆಯಲಾಗಿದೆ. ಇದರಿಂದಾಗಿ ಶಾಲೆಗಳಲ್ಲಿ ಮೊಟ್ಟೆಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.
ಪೂರೈಕೆ ಸಮಸ್ಯೆ ಜೊತೆಗೆ ಇದೀಗ ಮೊಟ್ಟೆ ಬೆಲೆ ಕೂಡ ಏರಿಕೆ ಆಗಿರುವುದು ಶಿಕ್ಷಕರಿಗೆ ಆರ್ಥಿಕ ಸಂಕಷ್ಟ ತಂದು ಒಡ್ಡಿದೆ.