ಬೆಂಗಳೂರು:– ಸೋಮಣ್ಣ ಫೋನ್ ರಿಸೀವ್ ಮಾಡ್ತಿಲ್ಲ, ಇನ್ನೇನೂ ಮಾಡಕ್ಕಾಗಲ್ಲ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪಕ್ಷದಿಂದ ಅನ್ಯಾಯ ಆಗಿದೆ ಎಂದು ಹೇಳಿಕೊಳ್ಳುತ್ತಿರುವ ವಿ.ಸೋಮಣ್ಣ ಅವರನ್ನು ಫೋನ್ನಲ್ಲಿ ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಅವರು ಫೋನ್ ರಿಸೀವ್ ಮಾಡುತ್ತಿಲ್ಲ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಬರಲಿಲ್ಲ ಅಂದರೆ ಏನು ಮಾಡಲು ಆಗುತ್ತದೆ?-ಹೀಗೆಂದು ಹೇಳಿದ್ದಾರೆ.
ವಿ. ಸೋಮಣ್ಣ ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ತಮಗೆ ಪಕ್ಷದಿಂದ ಅನ್ಯಾಯ ಆಗಿದೆ ಎಂದು ಸ್ವಾಮೀಜಿಗಳ ಬಳಿ ನೋವು ತೋಡಿಕೊಂಡಿದ್ದರು. ತಾನು ಗೋವಿಂದರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡದೆ ಘೋರ ಅಪರಾಧ ಮಾಡಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರು ತನ್ನನ್ನು ಬಲವಂತದಿಂದ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮಾಡಿದರು ಎಂದು ಕಣ್ಣೀರು ಹಾಕಿದ್ದರು. ಮಾಧ್ಯಮದ ಮಂದಿ ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಪ್ರಶ್ನಿಸಿದಾಗ, ಸೋಮಣ್ಣ ಅವರು ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಅವರ ಬಳಿ ಫೋನಲ್ಲಿ ಮಾತಾಡೋ ಪ್ರಯತ್ನ ಮಾಡಿದ್ದೇವೆ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಬರಲಿಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ಕೇಸನ್ನು ಹಿಂದಕ್ಕೆ ಪಡೆಯುವ ಸಂಪುಟ ನಿರ್ಧಾರ ಸರಿಯಲ್ಲ. ನಾವು ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದೇ ಸಿಬಿಐ ತನಿಖೆಗೆ ಕೊಟ್ಟಿದ್ದೆವು. ಈಗ ಡಿಕೆಶಿ ರಕ್ಷಣೆಗಾಗಿ ಸಿದ್ದರಾಮಯ್ಯ ಅವರು ಎಲ್ಲವೂ ಗೊತ್ತಿದ್ದೂ ತಿರುಚೋ ಕೆಲಸ ಮಾಡ್ತಿದ್ದಾರೆ ಎಂದು ಬಿಎಸ್ವೈ ಹೇಳಿದರು.
ನಾವು ಡಿ.ಕೆ.ಶಿವಕುಮಾರ್ ಕೇಸ್ ವಾಪಸ್ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ನಿರ್ಧಾರ ಮಾಡಿದ್ದೇವೆ. ಇದರ ಭಾಗವಾಗಿ ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಪ್ರತಿಭಟನೆ ನಡೆಸಲು ನಿಗದಿಯಾಗಿತ್ತು. ಆದರೆ, ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ಯಾತ್ರೆ ನಡೆಯುತ್ತಿರುವುದರಿಂದ ಅದಕ್ಕೆ ಗೌರವ ಸೂಚಿಸಿ ಪ್ರತಿಭಟನೆಯನ್ನು ಮುಂದೂಡಿದ್ದೇವೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.