ನವದೆಹಲಿ:- ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ನನ್ನ ಸಿಲುಕಿಸುವುದೇ ಇಡಿಯ ಏಕೈಕ ಉದ್ದೇಶ ಎಂದು ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಹೊಸ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಪಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಡಿ ಕಸ್ಟಡಿಯನ್ನು ನಾಲ್ಕು ದಿನಗಳಿಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ.
ಇದಕ್ಕೂ ಮುನ್ನ ಕಸ್ಟಡಿ ಅಂತ್ಯವಾದ ಹಿನ್ನಲೆ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಲಯದ (Court) ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಪ್ರವೇಶ ಮಾಡುವ ವೇಳೆ “ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ ಜನರು ಇದಕ್ಕೆ ಉತ್ತರಿಸಲಿದ್ದಾರೆ” ಎಂದು ಅಲ್ಲಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಅರವಿಂದ್ ಕೇಜ್ರಿವಾಲ್, ನನ್ನನ್ನು ಸಿಕ್ಕಿ ಹಾಕಿಸುವುದು ಇಡಿಯ ಏಕೈಕ ಉದ್ದೇಶವಾಗಿದೆ ಎಂದು ಆರೋಪಿಸಿದರು. ನಾನು ರಿಮಾಂಡ್ ಅನ್ನು ವಿರೋಧಿಸುತ್ತಿಲ್ಲ ಇಡಿ ಅವರು ಎಲ್ಲಿಯವರೆಗೆ ನನ್ನನ್ನು ಕಸ್ಟಡಿಯಲ್ಲಿ ಇರಿಸಬಹುದು? ಆದರೆ ಇಡಿ ತನಿಖೆಯ ಹೆಸರಿನಲ್ಲಿ ಸುಲಿಗೆ ದಂಧೆ ನಡೆಸುತ್ತಿರುವುದು ನಿಜವಾದ ಹಗರಣ ಎಂದು ವಾದಿಸಿದರು.
ಕೆಲವು ಆರೋಪಿಗಳು ತಮ್ಮನ್ನು ಬಂಧಿಸಿದ ನಂತರ ಭಾರತೀಯ ಜನತಾ ಪಕ್ಷಕ್ಕೆ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣವನ್ನು ದೇಣಿಗೆ ನೀಡಿದ್ದಾರೆ. ನಂತರ ಅವರು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಓರ್ವ ಆರೋಪಿ ಶರತ್ ಚಂದ್ರ ರೆಡ್ಡಿ ಬಿಜೆಪಿಗೆ 55 ಕೋಟಿ ದೇಣಿಗೆ ನೀಡಿದ್ದಾರೆ. ದಂಧೆ ನಡೆಯುತ್ತಿದೆ ಎಂಬುದಕ್ಕೆ ನನ್ನ ಬಳಿ ಸಾಕ್ಷ್ಯವಿದೆ. ಹಣದ ಜಾಡು ಪತ್ತೆಯಾಗಿದೆ. ಬಂಧನದ ನಂತರ ಬಿಜೆಪಿಗೆ 50 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಸಿಎಂ ಕೋರ್ಟ್ ಗಮನ ಸೆಳೆದರು.