ನಿರ್ದೇಶಕ ಗುರುಪ್ರಸಾದ್ ನಿರ್ದೇಶಿಸಿ, ನಟಿಸಿರುವ ಕೊನೆಯ ಚಿತ್ರ ‘ಎದ್ದೇಳು ಮಂಜುನಾಥ 2’ ಫೆಬ್ರುವರಿ 21 ರಂದು ರಾಜ್ಯದಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರದ ಮೇಲೆ ಗುರುಪ್ರಸಾದ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಗೂ ಮುನ್ನವೇ ಆತ್ಮಹತ್ಯೆಗೆ ಶರಣಾದರು. ನಿರ್ಮಾಪಕರು ಬಾಕಿ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸಿ ಯೋಜನೆಯನ್ನು ತೆರೆಗೆ ತರಲು ರೆಡಿಯಾಗಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮಾರ್ಗವನ್ನು ಅನುಸರಿಸುವ ಬದಲು, ಟೀಸರ್ಗಳ ರೂಪದಲ್ಲಿ ಚಿತ್ರದ ತುಣುಕುಗಳನ್ನು ಹೊರತರುವ ಮೂಲಕ ಸಂಚಲನ ಮೂಡಿಸಲು ಚಿತ್ರತಂಡ ನಿರ್ಧರಿಸಿದೆ. ‘ಕಿತ್ತೋದ ಪ್ರೇಮ’ ಹಾಡಿನ ಬಿಡುಗಡೆಯ ನಂತರ, ಚಿತ್ರತಂಡ ಇದೀಗ ಮೊದಲ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಮೈಸೂರು ರಮೇಶ್ ನಿರ್ಮಾಣದ ಎದ್ದೇಳು ಮಂಜುನಾಥ 2 ಚಿತ್ರಕ್ಕೆ ಗುರುಪ್ರಸಾದ್ ಅವರ ಬಹುತೇಕ ಎಲ್ಲ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ ಅವರ ಸಂಗೀತವಿದೆ. ಎದ್ದೇಳು ಮಂಜುನಾಥ ಚಿತ್ರದಲ್ಲಿ ನಾಯಕನಾಗಿ ಜಗ್ಗೇಶ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದ್ರೆ ಈ ಭಾರಿ ಸ್ವತಃ ಗುರುಪ್ರಸಾದ್ ಅವರೇ ನಿರ್ದೇಶನದ ಜೊತೆಗೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ನಾಯಕಿಯಾಗಿ ರಚಿತಾ ಮಹಾಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ರಂಗನಾಯಕದಲ್ಲಿಯೂ ರಚಿತಾ ನಾಯಕಿಯಾಗಿದ್ದರು.