ಚಳಿಗಾಲದಲ್ಲಿ ಪದೇಪದೆ ಶೀತ-ಕೆಮ್ಮು ಕಾಡುತ್ತಿದ್ದರೆ, ʻಚಳಿಗಾಲಾಂದ್ರೆ ಇಷ್ಟೆʼ ಎಂದು ತಳ್ಳಿ ಹಾಕುತ್ತೇವೆ. ಸ್ನಾಯುಸೆಳೆತ ಹಿಂಡುತ್ತಿದ್ದರೆ ಹಣೆಬರಹವನ್ನು ಹಳಿಯುತ್ತೇವೆ. ನಮಗೆ ವಿಟಮಿನ್ ಡಿ ಕೊರತೆಯಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದೇ ಇಲ್ಲ.
ವಿಟಮಿನ್ ಡಿ ಕೊರತೆ ಎಲ್ಲಾ ವಯೋಮಾನದವರನ್ನೂ ಬಾಧಿಸಬಹುದು. ಕಾರಣ, ಡಿ ಜೀವಸತ್ವ ದೊರೆಯುವ ಮೂಲಗಳ ಬಗ್ಗೆ ಇರುವ ಅರಿವಿನ ಕೊರತೆ. ಸೂರ್ಯನ ಬಿಸಿಲಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ದೊರೆಯುತ್ತದೆ, ನಿಜ. ಆದರೆ ದಿನದಲ್ಲಿ ಒಂದಿಷ್ಟು ಹೊತ್ತು ನಮ್ಮನ್ನು ನಾವು ಬಿಸಿಗೆ ಒಡ್ಡಿಕೊಳ್ಳಬೇಕಾಗುತ್ತದೆ.
ಡೈರಿ ಉತ್ಪನ್ನಗಳು
ಹಸುವಿನ ಹಾಲು ಸಹ ಡಿ ಜೀವಸತ್ವದ ಸ್ವಾಭಾವಿಕ ಮೂಲ. ಹಾಲು, ಮೊಸರು, ಬೆಣ್ಣೆ, ಚೀಸ್ಗಳ ಮೂಲಕ ವಿಟಮಿನ್ ಡಿ ಪಡೆಯಬಹುದು. ಮಾತ್ರವಲ್ಲ, ಹಾಲಿಗೆ ಪರ್ಯಾಯವಾಗಿ ಬಳಸುವ ಸೋಯಾ ಹಾಲು, ಅಕ್ಕಿ ಹಾಲು, ತೆಂಗಿನ ಹಾಲು, ಬಾದಾಮಿ ಹಾಲುಗಳಲ್ಲೂ ವಿಟಮಿನ್ ಡಿ ಸಾಕಷ್ಟು ಅಡಗಿದೆ.
ವಿಟಮಿನ್ ಡಿ ಕೊರತೆ ಇದೆ ಎಂಬುದು ಹೇಗೆ ತಿಳಿಯುತ್ತದೆ?
ಕೆಲವು ನೋವುಗಳು ಮತ್ತೆ ಮತ್ತೆ ಕಾಡಬಹುದು. ನಿಮ್ಮದೇ ಔಷಧಿಯಲ್ಲಿ ಉಪಶಮನಗೊಂಡರೂ ತಿರುಗಿ ಬರಬಹುದು. ಅಂದರೆ, ಸ್ನಾಯು ನೋವು ಅಥವಾ ಸ್ನಾಯು ಸೆಳೆತಗಳು ಕೆಲಕಾಲ ಬಾಧಿಸಿ ಕಡಿಮೆಯಾದಂತೆನಿಸಿ, ಮತ್ತೆಮತ್ತೆ ಬರಬಹುದು. ಆರ್ಥರೈಟಿಸ್ನಂತೆ ಮೂಳೆಗಳಲ್ಲಿ ನೋವು ಕಾಣಬಹುದು.
ಊಟ ಮಾಡಿದ್ದರೂ, ನಿದ್ದೆ ಸಾಕಷ್ಟು ಮಾಡಿದ್ದರೂ ಸದಾ ಆಯಾಸ ಕಾಡುತ್ತಲೇ ಎಂದಾದರೆ ಡಿ ಜೀವಸತ್ವ ಕಡಿಮೆಯಿರಬಹುದು. ಮೂಡ್ ಏರುಪೇರಾಗುವುದು ಸಹ ವಿಟಮಿನ್ ಡಿ ಕೊರತೆಯ ಲಕ್ಷಣಗಳಲ್ಲಿ ಒಂದು.