ಇತ್ತೀಚಿನ ದಿನಗಳಲ್ಲಿ ಲ್ಯಾಪ್ ಟಾಪ್/ ಕಂಪ್ಯೂಟರ್ ಮೂಲಕ ಕೆಲಸ ಮಾಡುವುದು ಅನಿವಾರ್ಯವಾದ ಕಾರಣ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.
ಆರೋಗ್ಯ ಕಾಪಾಡಿಕೊಳ್ಳಲು ನಾವು ತಿನ್ನುವ ಆಹಾರದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು.
ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಎಂಬಂತೆ ಆರೋಗ್ಯಯುತ ಆಹಾರ ಪದ್ಧತಿ ಅನುಸರಿಸಿಕೊಂಡರೆ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು. ಕಣ್ಣಿನ ಆರೋಗ್ಯ ಹೆಚ್ಚಿಸಲು ಯಾವೆಲ್ಲಾ ಆಹಾರಗಳನ್ನು ದಿನನಿತ್ಯ ಸೇವಿಸಬೇಕು ಎಂದು ತಿಳಿದುಕೊಳ್ಳೋಣ.
ಬಾದಾಮ್: ಬಾದಾಮ್ ನಲ್ಲಿ ಹೆಚ್ಚಿನ ಪೋಷಕಾಂಶಗಳು ಇದ್ದು, ʼವಿಟಮಿನ್ ಇʼ ಹಾಗೂ ವಿಟಮಿನ್ ಎ ಅಂಶ ಒಳಗೊಂಡಿದೆ. ʼವಿಟಮಿನ್ ಇʼ ಆರೋಗ್ಯಯುತ ಟಿಕ್ಯೂ, ಅನಿಶ್ಚಿತ ಮೆಲೆಕ್ಯೂಲ್ ರಕ್ಷಣೆ ಮಾಡುತ್ತದೆ. ʼವಿಟಮಿನ್ ಎʼ ಆರೋಗ್ಯಕರ ಟಿಶ್ಯೂಗಳ ನಿರ್ವಹಣೆಗೆ ಪ್ರಯೋಜನಕಾರಿ. ದಿನನಿತ್ಯ ನಿಯಮಿತ ಪ್ರಮಾಣದಲ್ಲಿ ಬಾದಾಮ್ ಸೇವನೆ ಮಾಡಿದರೆ ಕ್ಯಾಟರಾಕ್ಟ್ನಂತಹ ವಯೋ ಸಂಬಂಧಿತ ಕಾಯಿಲೆಗಳನ್ನು ದೂರವಿಡಬಹುದು.
ಒಣದ್ರಾಕ್ಷಿ: ಇದರಲ್ಲಿರುವ ಪಾಲಿಫೆನಾಲಿಕ್ ಫೈಟೊನ್ಯೂಟ್ರಿಯಂಟ್ ಅಂಶ ಕಣ್ಣುಗಳ ಆರೋಗ್ಯಕ್ಕೆ ಅತ್ಯುತ್ತಮ. ದೃಷ್ಟಿಗೆ ಹಾನಿಯುಂಟು ಮಾಡುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ಒಣದ್ರಾಕ್ಷಿ ಪರಿಣಾಮಕಾರಿ. ಕಣ್ಣುಗಳ ಮಾಂಸಖಂಡಗಳಿಗೆ ಹಾನಿಯಾಗದಂತೆ ಅವು ಕುಗ್ಗದಂತೆ ನೋಡಿಕೊಳ್ಳುತ್ತದೆ.
ನೆಲ್ಲಿಕಾಯಿ: ನೆಲ್ಲಿಕಾಯಿಯನ್ನು ಆಮ್ಲಾ ಎಂದು ಕೂಡಾ ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ರೋಗನಿರೋಧಕ ಶಕ್ತಿ ಹೊಂದಿದೆ. ಇದು ಕಣ್ಣಿಗಾಗುವ ಹಾನಿಯನ್ನು ತಡೆಯುತ್ತದೆ. ನೆಲ್ಲಿಕಾಯಿಯಿಂದ ಕಣ್ಣಿನ ರೆಟಿನಾ ಕೋಶಗಳು ಹಾಗೂ ದೇಹದ ಅತಿಚಿಕ್ಕ ರಕ್ತನಾಳಗಳಾದ ಕ್ಯಾಪಿಲ್ಲರಿಸ್ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ.
ಕ್ಯಾರೆಟ್: ಕ್ಯಾರೆಟ್ನಲ್ಲಿನ ವಿಟಮಿನ್ ಎ ಮತ್ತು ಬೆಟಾ ಕ್ಯಾರೊಟೆನ್ ಕಣ್ಣಿನ ಅರೋಗ್ಯ ಕಾಪಾಡುತ್ತದೆ. ವಿಟಮಿನ್ ಎ ಮತ್ತು ಬೆಟಾ ಕ್ಯಾರೊಟಿನೆ ಕಣ್ಣಿನ ಸೋಂಕು ಮತ್ತು ಇತರೆ ಕಣ್ಣಿನ ಗಂಭೀರ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ತೀಕ್ಷ್ಣ ದೃಷ್ಟಿ ಬೇಕಾದರೆ ದಿನನಿತ್ಯ ಕ್ಯಾರೆಟ್ ತಿನ್ನವ ಅಭ್ಯಾಸ ಬೆಳೆಸಬೇಕು.
ಪಾಲಕ್ ಸೊಪ್ಪು: ಈ ಸೊಪ್ಪು ಕೂಡ ಕಣ್ಣುಗಳಿಗೆ ಉತ್ತಮ ಆಹಾರ. ಪಾಲಕ್ ಹಾಗೂ ಇತರ ಹಸಿರು ಸೊಪ್ಪುಗಳಲ್ಲಿರುವ ಲ್ಯೂಟೈನ್ ಅಂಶ ಕಣ್ಣುಗಳು ಬೇಗ ಮುಪ್ಪಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.
ಇತರ ಸಿಟ್ರಸ್ ಹಣ್ಣುಗಳು: ನಿಂಬೆ, ದ್ರಾಕ್ಷಿ, ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಲ್ಲಿನ ಆಯಂಟಿ ಆಕ್ಸಿಡೆಂಟ್ ಕಣ್ಣಿನ ಹಾನಿಯನ್ನು ತಡೆಯುತ್ತದೆ. ವಿಟಮಿನ್ ಸಿ ಕಣ್ಣಿನ ಕಾರ್ಯ ನಿರ್ವಹಣೆ ಸುಧಾರಣೆ ಜೊತೆಗೆ ಕಣ್ಣಿನ ರಕ್ತದ ನರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ತುಪ್ಪ ಹಾಗೂ ಜೇನುತುಪ್ಪ: ಕಣ್ಣುಗಳು ಚೆನ್ನಾಗಿರಲು ತುಪ್ಪವನ್ನು ನಿಯಮಿತವಾಗಿ ಬಳಕೆ ಮಾಡಬೇಕು. ನಿಮ್ಮ ನಿಮ್ಮ ಜೀರ್ಣದ ಸಾಮರ್ಥ್ಯಕ್ಕೆ ತಕ್ಕಂತೆ ತುಪ್ಪ ಬಳಸುವುದು ಉತ್ತಮ. ತುಪ್ಪವನ್ನು ಬಳಸಿ ಹಲವು ವಿಧದ ಔಷಧಗಳನ್ನು ತಯಾರಿಸಲಾಗುತ್ತದೆ.
ಉತ್ತಮ ಜೇನುತುಪ್ಪ ಆಹಾರದಲ್ಲಿ ಬಳಸುವುದರಿಂದ ಕಣ್ಣುಗಳು ಆರೋಗ್ಯಪೂರ್ಣವಾಗಿರುತ್ತವೆ. ಕಲಬೆರಕೆ ಜೇನುತುಪ್ಪವನ್ನು ಬಳಕೆ ಮಾಡುವುದರಿಂದ ಕಣ್ಣುಗಳಿಗೆ ಹಾನಿ ಹೆಚ್ಚು ಎನ್ನಲಾಗುತ್ತದೆ.
ಮೊಟ್ಟೆ: ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳಿದ್ದು, ಕಣ್ಣಿನ ಆರೋಗ್ಯಕ್ಕೆ ಸಹಾಯಕವಾಗಿದೆ. ಮೊಟ್ಟೆಯಲ್ಲಿನ ಹಳದಿಯಲ್ಲಿ ವಿಟಮಿನ್ ಎ, ಲ್ಯೂಟಿನ್ ಅಂಶವಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
ಮೀನು: ಕಣ್ಣಿನ ಆರೋಗ್ಯಕ್ಕೆ ಮೀನು ಉತ್ತಮ ಆಹಾರಗಳಲ್ಲಿ ಒಂದು. ಮೀನಿನಲ್ಲಿರುವ ಸಲ್ಮೊನ್ ಅಂಶ ಉತ್ತಮ ಪರಿಣಾಮ ಬೀರುತ್ತದೆ. ಜೊತೆಗೆ ಇದರಲ್ಲಿನ ಒಮೆಗಾ- 3 ಫ್ಯಾಟಿ ಆಸಿಡ್ ಆರೋಗ್ಯಯುತ ಆಹಾರ ಪದ್ಧತಿಗೆ ಅಗತ್ಯವಾಗಿದೆ. ಒಮೆಗಾ-3 ಫ್ಯಾಟಿ ಆಯಸಿಡ್ ದೃಷ್ಟಿ ಅಭಿವೃದ್ಧಿಗೆ ಸಹಾಯಕವಾಗುವುದರ ಜೊತೆಗೆ ಕಣ್ಣಿನ ದೃಷ್ಟಿ ಮರಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಾಮಾನ್ಯವಾದ ಕಣ್ಣಿನ ದೃಷ್ಟಿಗೆ ಈ ಮೇಲಿನ ವಸ್ತುಗಳು ಸಹಾಯ ಮಾಡಬಹುದು. ಆದರೆ, ಇದರ ಹೊರತಾಗಿ ಕಾಡುವ ಗಂಭೀರ ಕಣ್ಣಿನ ಸಮಸ್ಯೆಗೆ ವೈದ್ಯರ ಸಂಪರ್ಕಿಸುವುದು ಉತ್ತಮ. ಇಲ್ಲದೇ ಹೋದಲ್ಲಿ ಇವು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.