ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru), ಮಂಡ್ಯ, ರಾಮನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಸುಮಾರು 30 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿ 10 ಕಡೆ, ಬಳ್ಳಾರಿಯಲ್ಲಿ 7 ಕಡೆ ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ 30 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು (BBMP Officials) ಸೇರಿದಂತೆ ಇತರ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.
ಒಟ್ಟು 30 ಕಡೆಗಳಲ್ಲಿ ಲೋಕಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕುಂದನ ಗ್ರಾಮ ಪಂಚಾಯತಿ ಪಿಡಿಓ ಪದ್ಮನಾಭ್ ಮನೆ, ಫಾರ್ಮ್ ಹೌಸ್ ಮೇಲೆ ದಾಳಿಯಾಗಿದೆ. ಮಲ್ಲೇಶ್ವರಂನಲ್ಲಿರುವ ಸಪ್ತಗಿರಿ ಲೇಔಟ್ 4 ಅಂತಸ್ತಿನ ಮನೆ ಮೇಲೆ ರೇಡ್ ಮಾಡಿದ್ದಾರೆ. ಅನುಪನಹಳ್ಳಿಯಲ್ಲಿ ಐದು ಎಕರೆ ಸಾಗುವಳಿ ಭೂಮಿ ಮತ್ತು ಫರ್ಮ್ ಹೌಸ್ಗೆ ಎಂಟ್ರಿ ನೀಡಿ ಶೋಧಕಾರ್ಯ ನಡೆಸ್ತಿದ್ದಾರೆ. ಜೊತೆಗೆ ತುಮಕುರಿನಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ದಾಬಸ್ ಪೇಟೆಯ ಇಂಡಸ್ಟ್ರೀಲ್ ಏರಿಯಾದಲ್ಲಿ ಗೋಡಾನ್ ಇರೋದು ಪತ್ತೆಯಾಗಿದೆ.
ಮತ್ತೊಂದು ಕಡೆ ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ಎಂ.ಎಲ್ ನಾಗರಾಜು ನಿವಾಸದ ಮೇಲೂ ದಾಳಿ ಆಗಿದೆ. ಇವರಿಗೆ ಸಂಬಂಧಿಸಿದ 7 ಕಡೆಗಳಲ್ಲಿ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಬಳ್ಳಾರಿಯಲ್ಲಿ 5 ಕಡೆ ಬೇನಾಮಿ ಆಸ್ತಿ ಮೇಲೂ ದಾಳಿಯಾಗಿದೆ. ಎರಡು ಪೆಟ್ರೋಲ್ ಬಂಕ್ ಸೇರಿ ಹಲವು ಕಡೆ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ. ಕೂಡ್ಲಿಗಿ ಪಟ್ಟಣ ಮತ್ತು ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಅಸ್ತಿ ಮಾಡಿರೋ ಆರೋಪ ಕೇಳಿಬಂದಿತ್ತು. ಹೀಗಾಗಿ ಚಿತ್ರದುರ್ಗ ಮತ್ತು ಬೆಂಗಳೂರು ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಮತ್ತೊಂದು ಕಡೆ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಬೆಂಬಲಿತನ ಬೇನಾಮಿ ಮೇಲೆ ಲೋಕಾ ರೈಡ್ ಆಗಿದೆ. ಬೆಂಗಳೂರು ದಕ್ಷಿಣ ತಾಲೂಕು ಚನ್ನೇನಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸುರೇಶ್ಗೆ ಸೇರಿದ ಮನೆ ಹಾಗೂ ಸ್ನೇಹಿತ ರಮೇಶ್ ಮನೆಯ ಮೇಲೂ ದಾಳಿಯಾಗಿದೆ. ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ದಾಳಿಯಾಗಿದೆ.
ಇದೀಗ ನಾಗರಾಜ್ಗೆ ಸೇರಿದ ಬಳ್ಳಾರಿಯ 7 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ ನಾಗರಾಜ್ ಹೆಸರಲ್ಲಿ 9 ಸೈಟ್ಗಳು, 3 ಮನೆಗಳು, 3 ಪೆಟ್ರೋಲ್ ಬಂಕ್, ಕೃಷಿ ಜಮೀನು, ಶಿಕ್ಷಣ ಸಂಸ್ಥೆಗಳು ಪತ್ತೆಯಾಗಿದೆ. ದಾಳಿ ವೇಳೆ ಹಲವಾರು ದಾಖಲೆಗಳನ್ನ ಪತ್ತೆಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.