ಹುಬ್ಬಳ್ಳಿ: ನಗರದ ಹೊರ ವಲಯದ ಗಬ್ಬರ ಬಳಿಮಂದಿರದಲ್ಲಿ ಕಳ್ಳತನ, ಮನೆಗಳ್ಳತನ ಹಾಗೂ ಬೈಕ್ ಸವಾರರನ್ನು ತಡೆದು ಸುಲಿಗೆ ಮಾಡುತ್ತಿದ್ದ ಗುಜರಾತ್ ಮೂಲದ ಇಬ್ಬರು ದರೋಡೆಕೋರರಿಗೆ ಬೆಂಡಿಗೇರಿ ಠಾಣೆ ಪೊಲೀಸರು ಮಂಗಳವಾರ ಬೆಳಗ್ಗೆ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಬಂಧಿತರು ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಾಲೈದು ಜನರ ತಂಡವು ಗುಜರಾತ್ನಿಂದ ಇಲ್ಲಿಗೆ ಬಂದು ಮಂದಿರ, ಮನೆಗಳ್ಳತನ, ಸುಲಿಗೆ ಮಾಡಿ ತಲೆಮರೆಸಿಕೊಳ್ಳುತ್ತಿದ್ದರು. ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವಳಿ ನಗರದ 17ಕಡೆ ನಾಕಾಬಂದಿ ಹಾಕಲಾಗಿತ್ತು. ಸೋಮವಾರ ತಡರಾತ್ರಿ ಬೈಕ್ ಮೇಲೆ ಹೊರಟಿದ್ದ ಕುಂದಗೋಳ ಮೂಲದ ವ್ಯಕ್ತಿಗೆ ನಾಲೈದು ಜನರ ತಂಡವು ಬೈಕ್ ಸೇರಿ ನಗದು, ಮೊಬೈಲ್ ಕಿತ್ತುಕೊಂಡು, ಹಲ್ಲೆ ಮಾಡಿ ಪರಾರಿಯಾಗಿದ್ದರು. ಇದಾದ ಸ್ವಲ್ಪ ಸಮಯದ ನಂತರ ರವಿಚಂದ್ರ ಎಂಬುವರ ಸುಲಿಗಿಗೆ ಮಾಡಿತ್ತು. ತದನಂತರ ಮಂಟೂರು ರಸ್ತೆಯಲ್ಲಿ ಶಾರಿಕ್ ಎಂಬುವರ ಮನೆ ಮೇಲೆ ಕಲ್ಲು ತೂರಾಟ ಮಾಡಿ ದರೋಡೆಗೆ ಯತ್ನಿಸಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ನಮ್ಮ ಸಿಬ್ಬಂದಿ ಅಲರ್ಟ್ ಆಗಿ ತಪಾಸಣೆ ನಡೆಸುವಾಗ, ಅನುಮಾನಾಸ್ಪದವಾಗಿ ಬೈಕ್ ಮೇಲೆ ವೇಗವಾಗಿ ಹೋಗುತ್ತಿದ್ದವರನ್ನು ತಡೆಯಲು ಮುಂದಾಗಿದ್ದರ. ಅವರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ತಮ್ಮ ಆತ್ಮರಕ್ಷಣೆಗಾಗಿ ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಇಬ್ಬರ ಕಾಲಿಗೆ ತಲಾ ಒಂದು ಗುಂಡು ಹೊಡೆದು ಬಂಧಿಸಿದ್ದಾರೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ.
ಗುಂಡೇಟಿಕೊಳಗಾದವರು ದಿಲೀಪ್ ಮತ್ತು ನೀಲೇಶ್ ಗುಜರಾತ್ ಮೂಲದವರು. ಇವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿ ಗಬ್ಬರನ ಜೈನ ಮಂದಿರದ ಹುಂಡಿಯಲ್ಲಿದ್ದ 4ಲಕ್ಷ ರೂ. ಕದ್ದಿದ್ದರು. ಎಪಿಎಂಸಿ-ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಅಂಗಡಿಗಳಿಗೆ ಕನ್ನ ಹಾಕಿದ್ದರು. ಅಲ್ಲದೇ ಇವರ ಮೇಲೆ ಗದಗ, ಬಳ್ಳಾರಿ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಉಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ವೇಳೆ ಬೆಂಡಿಗೇರಿ ಠಾಣೆ ಪಿಎಸ್ಐ ಅಶೋಕ, ಪಿಸಿಗಳಾದ ಶರಣು, ಸೋಮು ಮೇಟಿ ಗಾಯಗೊಂಡಿದ್ದು, ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಲ್ ಆ್ಯಂಡ್ ಒ ಡಿಸಿಪಿ ಮಹಾನಿಂಗ ನಂದಗಾಂವಿ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ತೆರಳಿ ಪರಿಶಿಲಿಸಿದರು ಮತ್ತು ಕೆಎಂಸಿಆರ್ಐ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.