ಪಾಕ್ ನಲ್ಲಿ ಇಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಇಂದು ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮತದಾನ ಪ್ರಕ್ರಿಯೆಯು ಬೆಳಗ್ಗೆ 8 ರಿಂದ ಶುರುವಾಗಿದ್ದು ಸಂಜೆ 5 ರವರೆಗೆ ನಡೆಯಲಿದ್ದು, ಪಾಕ್ ನ ಎಲ್ಲಾ ಮತಗಟ್ಟೆಗಳಲ್ಲಿ 128 ಮಿಲಿಯನ್ಗಿಂತಲೂ ಹೆಚ್ಚು ಮತದಾರರು ಮತ ಚಲಾಯಿಸಲಿದ್ದಾರೆ. ಈ ನಡುವೆ ಭದ್ರತೆಯ ದೃಷ್ಟಿಯಿಂದ ಇಡೀ ದೇಶಾದ್ಯಂತ ಇಂದು ಮೊಬೈಲ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ದೇಶಾದ್ಯಂತ ಮೊಬೈಲ್ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಉಸ್ತುವಾರಿ ಆಂತರಿಕ ಸಚಿವಾಲಯವು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪಾಕಿಸ್ತಾನದ ಒಟ್ಟಾರೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಪಾಕಿಸ್ತಾನದಲ್ಲಿ ಒಟ್ಟು 90,675 ಮತಗಟ್ಟೆಗಳಿರುತ್ತವೆ. ಈ ಕೇಂದ್ರಗಳಲ್ಲಿ 2,76,402 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗದ ಪ್ರಕಾರ, 12.85 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ 5121 ಅಭ್ಯರ್ಥಿಗಳಲ್ಲಿ ಒಟ್ಟು 12,85,85,760 ನೋಂದಾಯಿತ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಟ್ರಾನ್ಸ್-ಜೆಂಡರ್ ಅಭ್ಯರ್ಥಿಗಳು ಸೇರಿದ್ದಾರೆ. ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ 12,123 ಪುರುಷರು, 570 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳು ಸೇರಿದಂತೆ 12,695 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 100ಕ್ಕೂ ಹೆಚ್ಚು ವಿದೇಶಿ ವೀಕ್ಷಕರು ಮತ್ತು ವಿದೇಶಿ ಪತ್ರಕರ್ತರು ಚುನಾವಣೆ ವರದಿ ಮಾಡಲು ದೇಶಕ್ಕೆ ಬಂದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಿಕಂದನ್ ಸುಲ್ತಾನ್ ರಜಾ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಜೈಲು ಪಾಲಾಗಿರುವುದರಿಂದ ಹಾಗೂ ಚುನಾವಣಾ ಚಿಹ್ನೆ ವಿವಾದದಿಂದಾಗಿ ಷರೀಫ್ ಗೆ ಸಂಪೂರ್ಣ ಲಾಭವಾಗಿದೆ. ಪಿಪಿಪಿಯ ಬಿಲಾವಲ್ ಭುಟ್ಟೋ ಪಂಜಾಬ್ನಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಹೀಗಾಗಿ ಷರೀಫ್ ಗೆದ್ದರೆ ನಾಲ್ಕನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ.