ಗಾಂಜಾ ಮತ್ತು ಮಾದಕ ದ್ರವ್ಯ ದಂಧೆಕೋರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ತಮಿಳು ನಟ ಮನ್ಸೂರ್ ಅಲಿ ಖಾನ್ ಪುತ್ರನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಅಲಿ ಖಾನ್ ತುಘಲಕ್ ನನ್ನು ತಿರುಮಂಗಲಂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಗಾಂಜಾ ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗಳು ಈ ಹಿಂದಿನಿಂದಲೂ ಆತನೊಂದಿಗೆ ಸಂಪರ್ಕ ಹೊಂದಿರುವುದಾಗಿ ಗುಪ್ತಚರ ಇಲಾಖೆಯು ಮಾಹಿತಿ ನೀಡಿದ ನಂತರ ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ವರ್ಷವಷ್ಟೇ ಖಳ ನಟ ಮನ್ಸೂರ್ ಅಲಿ ಖಾನ್ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಭಾರೀ ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿದ್ದರು. ಖ್ಯಾತ ನಟ ಚಿರಂಜೀವಿ ಮತ್ತು ನಟಿ ಖುಷ್ಭೂ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಆಗಷ್ಟೇ ತೆರೆಗೆ ಬಂದಿದ್ದ ‘ಲಿಯೋ’ ಸಿನಿಮಾದಲ್ಲಿ ನಟ ಮನ್ಸೂರ್ ಅಲಿ ಖಾನ್ ನಟಿಸಿದ್ದರು.
ಸಿನಿಮಾ ರಿಲೀಸ್ ಆದ ನಂತರ ಸಂದರ್ಶನವೊಂದರಲ್ಲಿ ಮಾತನಾಡುವಾಗ, ‘ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಗೊತ್ತಾದಾಗ, ನನಗೆ ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ಭಾವಿಸಿದ್ದೆ. ನನ್ನ ಹಿಂದಿನ ಸಿನಿಮಾಗಳಲ್ಲೂ ನಾನು ಬೇರೆ ನಟಿಯ ಜೊತೆಗೆ ಮಾಡಿದಂತೆ ತ್ರಿಷಾರನ್ನು ಕೂಡ ಬೆಡ್ ರೂಮ್ಗೆ ಹೊತ್ತುಕೊಂಡು ಹೋಗಿ ಅತ್ಯಾಚಾರ ಮಾಡುವ ದೃಶ್ಯ ಇರುತ್ತದೆ ಎಂದುಕೊಂಡಿದ್ದೆ. ನಾನು ಹಲವು ಬಾರಿ ಅತ್ಯಾಚಾರದ ಸೀನ್ಗಳಲ್ಲಿ ನಟಿಸಿದ್ದೇನೆ. ಆದರೆ ‘ಲಿಯೋ’ ಸಿನಿಮಾದಲ್ಲಿ ತ್ರಿಷಾ ಮುಖವನ್ನು ಕೂಡ ನನಗೆ ತೋರಿಸಲಿಲ್ಲ’ ಎಂಬಂಥ ವಿವಾದಾತ್ಮಕ ಹೇಳಿಕೆಯನ್ನು ಮನ್ಸೂರ್ ನೀಡಿದ್ದರು. ಇದೀಗ ಮನ್ಸುತ್ ಪುತ್ರ ಡ್ರಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರೋದು ನಟನಿಗೆ ಮತ್ತಷ್ಟು ತಲೆ ನೋವು ತಂದಿದೆ.