ಬಳ್ಳಾರಿ:- ಜಿಲ್ಲೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬರ ಪರಿಶೀಲನೆ ಮಾಡಿದ್ದಾರೆ. ಜಿಲ್ಲೆಯ ಸಂಡೂರು ತಾಲ್ಲೂಕಿನ ಕೋಡಾಲು ಹಾಗೂ ರಾಜಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬರ ಪರಿಶೀಲನೆ ಮಾಡಿದ್ದಾರೆ.
ಹತ್ತಿ, ನವಣೆ ಮತ್ತು ಸಜ್ಜೆ ಜಮೀನುಗಳಿಗೆ ಸಚಿವರು ಭೇಟಿ ನೀಡಿದ್ದು, ಮಳೆ ಇಲ್ಲದೆ ಅನಾವೃಷ್ಠಿಯಿಂದ ಹಾಳಾಗಿರುವ ಬೆಳೆ ಹಾನಿ ಪರಿಶೀಲನೆ ಮಾಡಿದ್ದಾರೆ. ಸಂಡೂರು ತಾಲ್ಲೂಕಿನ ಕೋಡಾಲು ಗ್ರಾಮ ವ್ಯಾಪ್ತಿಯ ರೈತ ಮಾರೆಪ್ಪನ ನವಣೆ, ಹತ್ತಿ ಬೆಳೆ ವೀಕ್ಷಣೆ ಮಾಡಿದ್ದಾರೆ.
ಇದೇ ವೇಳೆ ಬೆಳೆ ಹಾನಿ ಕುರಿತು ಅಧಿಕಾರಿಗಳು ಹಾಗೂ ರೈತರಿಂದ ಸಚಿವರು ಮಾಹಿತಿ ಪಡೆದಿದ್ದಾರೆ. ಫೂಟ್ಸ್ ಐಡಿಯಲ್ಲಿ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನನ್ನು ನೋಂದಣಿ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಇದರಿಂದ ಬರ ಪರಿಹಾರ ನೀಡಲು ಅನುಕೂಲವಾಗಲಿದೆ. ಈಗಾಗಲೇ ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರದ ಕೃಷಿ ಸಚಿವರ ಜೊತೆ ಸಭೆ ನಡೆಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಇಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.
ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಬರ ಪರಿಹಾರದ ಹಣ ಬಿಡುಗಡೆ ಮಾಡಲಿದೆ. ಕೇಂದ್ರದಿಂದ ಬರ ಪರಿಹಾರ ಬಂದ ತಕ್ಷಣ, ಸಣ್ಣ ಮತ್ತು ಅತಿ ಸಣ್ಣ ರೈತರ ಭೂಮಿಯನ್ನು ಇಂತಿಷ್ಟು ಹಾನಿ ಎಂದು ಪರಿಗಣನೆ ಮಾಡಲಾಗಿದೆ. ಫ್ರೂಟ್ಸ್ ತಂತ್ರಾಂಶದ ಮೂಲಕ ನೇರವಾಗಿ ರೈತರಿಗೆ ಬರ ಪರಿಹಾರವನ್ನು ನೀಡಲಾಗುವುದು. ಬರ ಅಧ್ಯಯನದ ಸಂದರ್ಭದಲ್ಲಿ ಸಚಿವರಿಗೆ ಸಂಡೂರು ಶಾಸಕ ಈ.ತುಕಾರಾಂ ಸಾಥ್ ನೀಡಿದ್ದಾರೆ.