ಬೆಂಗಳೂರು:- ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರದಿಂದ ಡಾ ಮಂಜುನಾಥ್ ಸ್ಪರ್ಧೆ ಬಹುತೇಕ ಖಚಿತವಾಗಿದೆ.
ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ನ ಡಿಕೆ ಸುರೇಶ್ ವಿರುದ್ಧ ಕಣಕ್ಕಿಳಿಸಲು ಜೆಡಿಎಸ್, ಬಿಜೆಪಿ ಮೈತ್ರಿ ಮುಂದಾಗಿದೆ. ಬಿಜೆಪಿಯಿಂದ ಸಂಸದ ಸುರೇಶ್ ವಿರುದ್ಧ ಸ್ಪರ್ಧೆ ಮಾಡಲು ಮಂಜುನಾಥ್ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಸ್ಪರ್ಧೆ ಸಂಬಂಧ ಮಂಗಳವಾರ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ದೆಹಲಿಯಲ್ಲಿ ಅಂತಿಮ ಮಾತುಕತೆ ನಡೆಸಲಿದ್ದಾರೆ. ಸ್ಪರ್ಧೆಗೆ ಮಂಜುನಾಥ್ ಒಪ್ಪಿಗೆ ನೀಡಿರುವ ಬಗ್ಗೆ ಕುಮಾರಸ್ವಾಮಿ ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಬೆಂಗಳೂರಿನ ಹೆಚ್ಡಿ ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಸಭೆಯಲ್ಲಿ ಮಂಜುನಾಥ್ ಅವರನ್ನು ಮನವೊಲಿಸಿ ಕಣಕ್ಕಿಳಿಸುವ ಬಗ್ಗೆ ಚರ್ಚೆಯಾಗಿತ್ತು. ಸಭೆಯಲ್ಲಿ ಮಾಜಿ ಸಚಿವರಾದ ಸಿಪಿ ಯೋಗೆಶ್ವರ್, ಮುನಿರತ್ನ, ಶಾಸಕ ಎಂ ಕೃಷ್ಣಪ್ಪ, ನಿಖಿಲ್ ಕುಮಾರಸ್ವಾಮಿ ಸೇರಿ ಉಭಯ ಪಕ್ಷಗಳ ನಾಯಕರು ಭಾಗಿಯಾಗಿ ಮಂಜುನಾಥ್ ಸ್ಪರ್ಧೆ ಪರ ಒಲವು ವ್ಯಕ್ತಪಡಿಸಿದ್ದರು.