ಗದಗ: ಡಾ. ಬಿ ಆರ್ ಅಂಬೇಡ್ಕರ್ ಪುಥ್ಥಳಿ ಪ್ರತಿಷ್ಠಾಪನೆ ಮಾಡದ ಹಿನ್ನೆಲೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರೋ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಡಾ. ಬಿ ಆರ್ ಅಂಬೇಡ್ಕರ್ ಅಭಿಮಾನಿ ಬಳಗದಿಂದ ಪ್ರತಿಭಟನೆ ಮಾಡಲಾಗಿದೆ.
ಮುಂಡರಗಿ ಪಟ್ಟಣದ ಪೊಲೀಸ್ ಮೈದಾನದ ಪಕ್ಕದ ಉದ್ಯಾನವನದಲ್ಲಿ ಅಂಬೇಡ್ಕರ್ ಪುಥ್ಥಳಿ ನಿರ್ಮಾಣ ಮಾಡಲು ಅಕ್ಟೋಬರ್ 22, 2021 ರಲ್ಲೇ ಠರಾವು ಪಾಸ್ ಮಾಡಲಾಗಿತ್ತು. ಆದರೆ ಈವರೆಗೂ ಪ್ರತಿಷ್ಠಾಪನೆ ಮಾಡದ ಹಿನ್ನೆಲೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನು ಪುಥ್ಥಳಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ಮಾಡುವಂತೆ ಸಂಘಟನೆಗಳು ಗಡುವು ನೀಡಿದ್ದವು. ಗಡುವು ಮುಗಿದಿದ್ದರಿಂದ ಇಂದು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ.
ಪೊಲೀಸರು ಪುರಸಭೆ ಗೇಟ್ ಬಂದ್ ಮಾಡಿದ್ರೂ ಕೂಡಾ ಗೇಟ್ ದೂಡಿಕೊಂಡು ಒಳನುಗ್ಗಿ ಪ್ರತಿಭಟನಾಕಾರರು ಮುತ್ತಿಗೆಗೆ ಯತ್ನಿಸಿದ್ರು. ತಮಟೆ ಬಾರಿಸುತ್ತಾ ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದ್ರು. ಸ್ಥಳದಲ್ಲೇ ತಹಶಿಲ್ದಾರ ಧನಂಜಯ ಮಾಲಗಿತ್ತಿ ಮತ್ತು ಸಿಪಿಐ ಮಂಜುನಾಥ ಹಾಜರಿದ್ರೂ ಕೂಡಾ ಸ್ಥಳಕ್ಕೆ ಎಸಿ ಬರುವಂತೆ ಪ್ರತಿಭಟನಾಕಾರರು ಬಿಗಿ ಪಟ್ಟು ಹಿಡಿದು ಪುರಸಭೆ ಮುಂದೆ ಕುಳಿತು ಪ್ರತಿಭಟನೆ ಮಾಡ್ತಿದ್ದಾರೆ.