ಬೆಂಗಳೂರು:- ಮಗುವಿನ ಪಿತೃತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಮಾನಸಿಕ ಕ್ರೌರ್ಯ ಇದ್ದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮುದಗಲ್ಮತ್ತು ಕೆ.ವಿ.ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠವು ಈ ಅಭಿಪ್ರಾಯ ಪಟ್ಟಿದೆ.
ಹೆಂಡತಿಯ ವ್ಯಭಿಚಾರಕ್ಕೆ ಸಂಬಂಧಿಸಿದಂತೆ ಪತಿಯು ಆಧಾರರಹಿತ ಆರೋಪಗಳನ್ನು ಮಾಡುವುದು, ಹೆಂಡತಿಯ ನಡತೆಯ ಬಗ್ಗೆ ಶಂಕಿಸುವುದು, ಮಗುವಿನ ಪಿತೃತ್ವದ ಬಗ್ಗೆ ಅನುಮಾನಿಸುವುದು, ಹೆಂಡತಿ ಮತ್ತು ಮಗನನ್ನು ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸುವುದು ಪತ್ನಿಗೆ ಮಾನಸಿಕ ಕ್ರೌರ್ಯ ನೀಡುವುದಕ್ಕೆ ಸಮನಾಗಿರುತ್ತದೆ ಎಂದು ಹೇಳಿರುವ ಹೈಕೋರ್ಟ್, ವ್ಯಕ್ತಿಯೊಬ್ಬರಿಗೆ ವಿಚಾರಣಾಧೀನ ನ್ಯಾಯಾಲಯವು 2011ರಲ್ಲಿ ನೀಡಿದ್ದ ವಿಚ್ಛೇದನ ಆದೇಶವನ್ನು ರದ್ದುಗೊಳಿಸಿದೆ.
ಪತ್ನಿ ತಿಂಗಳಿಗೆ ಹದಿನೈದು ದಿನ ತನ್ನ ಹೆತ್ತವರೊಂದಿಗೆ ವಾಸಿಸುತ್ತಾಳೆ ಮತ್ತು ಆಗಾಗ್ಗೆ ತನ್ನೊಂದಿಗೆ ಜಗಳವಾಡುತ್ತಿದ್ದಳು ಎಂದು ಆರೋಪಿಸಿದ್ದ ಪತಿ, ಹೆಂಡತಿ ವ್ಯಭಿಚಾರ ಮತ್ತು ‘ಮಾಟಮಂತ್ರ’ ಮಾಡಿದ್ದಾಳೆ ಎಂದು ಶಂಕಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ 2003ರಲ್ಲಿ, ತಮ್ಮ ಮದುವೆ ರದ್ದುಗೊಳಿಸುವಂತೆ ಕೋರಿ ಮನವಿ ಮಾಡಿದ್ದರು. ಕೌಟಂಬಿಕ ನ್ಯಾಯಲಯವು ವ್ಯಭಿಚಾರದ ಆರೋಪಗಳನ್ನು ತಿರಸ್ಕರಿಸಿದರೂ, ಕ್ರೌರ್ಯದ ಆಧಾರದ ಮೇಲೆ ಪತಿಯ ವಿಚ್ಛೇದನ ಅರ್ಜಿಯನ್ನು ಮಾನ್ಯ ಮಾಡಿತ್ತು.
ವಿಚ್ಛೇದನ ಆದೇಶವನ್ನು ಪತ್ನಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಳು. ಪತಿಯ ಆರೋಪವನ್ನು ಕುಟುಂಬ ನ್ಯಾಯಾಲಯವು ವಿಧಿವಿಜ್ಞಾನ ಪುರಾವೆಗಳಿಲ್ಲದೆ ಒಪ್ಪಿಕೊಂಡಿದ್ದು, ಮಾಟಮಂತ್ರ ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪತ್ನಿ ಪರ ವಕೀಲರು ವಾದ ಮಂಡಿಸಿದ್ದರು.
ಪತ್ನಿ ಮೂರು ತಿಂಗಳಿಗೊಮ್ಮೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುತ್ತಿದ್ದಳು ಎಂದು ಪತಿಯೇ ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿರುವ ನ್ಯಾಯಾಲಯವು, ವಿವಾಹಿತ ಮಹಿಳೆ ಮೂರು ತಿಂಗಳಿಗೊಮ್ಮೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುವುದು ಎಲ್ಲಾ ಕುಟುಂಬಗಳಲ್ಲೂ ಸಾಮಾನ್ಯ. ಮಾಟಮಂತ್ರ ಮತ್ತು ಮಾದಕವಸ್ತುಗಳ ನಿರ್ವಹಣೆಯ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.
ವ್ಯಭಿಚಾರದ ಬಗ್ಗೆ ಪತಿಯು ಆಧಾರರಹಿತ ಆರೋಪ ಮಾಡಿರುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ತೀರ್ಮಾನಿಸಿದ ನ್ಯಾಯಾಲಯವು, ವಿಚ್ಛೇದನವನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿತು