ಟೊಮೇಟೋ ಇಲ್ಲದೇ ಅಡುಗೆ ಅಪೂರ್ಣ ಎನಿಸುತ್ತೆ. ಸಾಮಾನ್ಯವಾಗಿ ಎಲ್ಲ ಅಡುಗೆಗಳಲ್ಲೂ ಟೊಮೇಟೋ ಬಳಕೆಯಾಗುತ್ತೆ. ಕೆಲವೊಂದು ಅಡುಗೆಯಲ್ಲಿ ನಾವು ಮೊದಲು ಟೊಮೇಟೋವನ್ನು ಬೇಯಿಸಿಕೊಳ್ತೇವೆ. ಬೇಯಿಸದ ಟೊಮೇಟೋದ ಸಿಪ್ಪೆಯನ್ನು ತೆಗೆದು ಎಸೆದು ಬಿಡ್ತೇವೆ. ಹೀಗೆ ನಾವು ಎಸೆಯುವ ಟೊಮೇಟೋ ಸಿಪ್ಪೆಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಟೊಮೇಟೋ ಸಿಪ್ಪೆಯು ಅನೇಕ ಜೀವಸತ್ವ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾರೊಟೊನೈಡ್ ಮತ್ತು ಫ್ಲೇವನಾಲ್ ಗಳಿವೆ.
ಟೊಮೇಟೋ ಸಿಪ್ಪೆಗೆ ಕ್ಯಾನ್ಸರ್ ತಡೆಯುವ ಶಕ್ತಿಯಿದೆ : ಶರೀರದಲ್ಲಿ ಜೀವಕೋಶಗಳ ಬೆಳವಣಿಗೆ ವೇಗವಾಗಿ ನಡೆದಾಗ ಗಡ್ಡೆಗಳು ರೂಪಗೊಳ್ಳಲು ಆರಂಭಿಸುತ್ತವೆ. ಈ ಗಂಟುಗಳಿಂದ ದೇಹದ ಅಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಆ ಗಂಟುಗಳೇ ಕ್ಯಾನ್ಸರ್ ರೂಪವನ್ನು ಪಡೆಯುತ್ತವೆ. ಟೊಮೇಟೋ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದ ಲೈಕೋಪೀನ್ ಇರುತ್ತದೆ. ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುತ್ತದೆ. ಅನೇಕ ಅಧ್ಯಯನಗಳು ಟೊಮೇಟೋ ಸಿಪ್ಪೆಯಿಂದ ಪ್ರಾಸ್ಟೇಟ್, ಶ್ವಾಸಕೋಶ ಮತ್ತು ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಗಟ್ಟಬಹುದೆಂದು ಹೇಳಿವೆ.
ರಕ್ತನಾಳದ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ : ಇತ್ತೀಚಿನ ದಿನಗಳಲ್ಲಿ ಅನೇಕರು ಹೈ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗಿನ ಕಳಪೆ ಜೀವನ ಮತ್ತು ಆಹಾರ ಶೈಲಿಯ ಕಾರಣದಿಂದಾಗಿ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಸಮಸ್ಯೆಗಳು ಉದ್ಭವವಾಗುತ್ತವೆ. ಇಂತಹ ಸಮಸ್ಯೆಗಳಿಗೆ ಟೊಮೇಟೋ ಸಿಪ್ಪೆ ದಿವ್ಯೌಷಧವಾಗಿದೆ. ಟೊಮೇಟೋ ಸಿಪ್ಪೆಯಲ್ಲಿ ಬೀಟಾ ಕ್ಯಾರೋಟಿನ್ ಇರುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ರಕ್ತದ ಹರಿವು ಹೆಚ್ಚಳವಾಗಿ ರಕ್ತದೊತ್ತಡವೂ ಸಮತೋಲನದಲ್ಲಿರುತ್ತದೆ.
ಚರ್ಮದ ಹೊಳಪು ಹೆಚ್ಚುತ್ತೆ : ಟೊಮೇಟೋದಲ್ಲಿರುವ ಲೈಕೋಪಿನ್ ಅಂಶವು ದೇಹಕ್ಕೆ ಸೇರಿದ ತಕ್ಷಣ ಅದು ಕೆಲಸ ಮಾಡಲು ಆರಂಭಿಸುತ್ತದೆ. ಇದು ಚರ್ಮಕ್ಕೆ ಹೆಚ್ಚು ಹೊಳಪನ್ನು ನೀಡುತ್ತದೆ. ಟೊಮೇಟೋದಲ್ಲಿರುವ ವಿಟಮಿನ್ ಸಿ ಚರ್ಮದಲ್ಲಿರುವ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಟೊಮೇಟೋ ಸೇವನೆ ಅಗತ್ಯವಾಗಿದೆ. ಟೊಮೇಟೋ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಬ್ಲಾಕ್ ಹೆಡ್ ಮತ್ತು ರಂದ್ರಗಳು ಕಡಿಮೆಯಾಗುತ್ತದೆ. ಆಯ್ಲಿ ಸ್ಕಿನ್ ಹೊಂದಿರುವವರಿಗೂ ಟೊಮೇಟೋ ಸಿಪ್ಪೆ ಬಹಳ ಪ್ರಯೋಜನಕಾರಿ. ಟೊಮೇಟೋ ಸಿಪ್ಪೆಯಿಂದ 10ರಿಂದ 15 ನಿಮಿಷಗಳ ಕಾಲ ನಿಮ್ಮ ಮುಖವನ್ನು ಉಜ್ಜಿಕೊಂಡರೆ ಮುಖದ ಮೇಲಿರುವ ಎಣ್ಣೆಯ ಅಂಶ ದೂರವಾಗುತ್ತದೆ.
ದೃಷ್ಟಿಯನ್ನು ಚುರುಕುಗೊಳಿಸುತ್ತದೆ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಟಿವಿ ಮುಂತಾದವುಗಳಿಂದ ಹೆಚ್ಚಿನ ಮಂದಿ ಕಣ್ಣಿನ ತೊಂದರೆಯನ್ನು ಅನುಭವಿಸುತ್ತಾರೆ. ಅಂತಹ ತೊಂದರೆ ಇರುವವರು ಮನೆಯಲ್ಲಿಯೇ ಸುಲಭವಾಗಿ ಕಣ್ಣಿನ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ನಿಮಗೆ ದೃಷ್ಟಿದೋಶವಿದ್ದಲ್ಲಿ ನೀವು ಅಗತ್ಯವಾಗಿ ಟೊಮೇಟೋ ಸೇವನೆ ಮಾಡಲೇಬೇಕು. ಟೊಮೇಟೋದಲ್ಲಿ ಬೀಟಾ ಕ್ಯಾರೋಟಿನ್ ಎಂಬ ಎಂಟಿ ಆಕ್ಸಿಡೆಂಟ್ ಇರುತ್ತದೆ. ಇದು ವಿಟಮಿನ್ ಸಿ ಯನ್ನು ವಿಟಮಿನ್ ಎ ಆಗಿ ಪರಿವರ್ತಿಸಿ ಕಣ್ಣಿನ ಸಮಸ್ಯೆಗಳನ್ನು ದೂರಮಾಡುತ್ತದೆ.
ಮೂಳೆಗಳು ಬಲಶಾಲಿಯಾಗುತ್ತೆ : ಟೊಮೇಟೋದಲ್ಲಿ ವಿಟಮಿನ್ ಸಿ, ಫೋಲೆಟ್, ಕ್ಲೋರೋಜೆನಿಕ್ ಎಸಿಡ್ ಮತ್ತು ಪೊಟ್ಯಾಶಿಯಮ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರಕ್ತನಾಳಗಳು ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಟೊಮೇಟೋದಿಂದ ರಕ್ತನಾಳಗಳು ಸ್ವಚ್ಛವಾಗಿ ಮೂಳೆಗಳು ಬಲಶಾಲಿಯಾಗುತ್ತವೆ. ಇಷ್ಟೆಲ್ಲ ಆರೋಗ್ಯಕರ ಅಂಶಗಳನ್ನು ಹೊಂದಿರುವ ಟೋಮೇಟೋವನ್ನು ನಾವು ಸಿಪ್ಪೆಸಹಿತ ಸೇವನೆ ಮಾಡಬೇಕು. ಅದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ವಿಟಮಿನ್ ಗಳು ಸಿಗುತ್ತವೆ. ಟೊಮೇಟೋದ ಬೆಲೆ ಹೆಚ್ಚಾಗಿದೆಯೆಂಬ ಕಾರಣಕ್ಕೆ ಟೊಮೇಟೋ ಸೇವನೆಯನ್ನು ನಿಲ್ಲಿಸಿದರೆ ಅದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ.