ಬೀಜಿಂಗ್: ಅಮೆರಿಕ ದೇಶವು ತೈವಾನ್ಗೆ ಹೊಸ ಕಂತಿನ ಶಸ್ತ್ರಾಸ್ತ್ರ ಮಾರಾಟ ಮತ್ತು ಮಿಲಿಟರಿ ನೆರವು ನೀಡಲು ಮುಂದಾಗಿದೆ. ಆದರೆ ಅಮೆರಿಕಾದ ಈ ಕ್ರಮವನ್ನು ಖಂಡಿಸಿರುವ ಚೀನಾ ‘ಅಮೆರಿಕವು ಬೆಂಕಿಯೊಂದಿಗೆ ಸರಸವಾಡುತ್ತಿದೆ’ ಎಂದು ಎಚ್ಚರಿಕೆ ನೀಡಿದೆ.
ತೈವಾನ್ಗೆ 571 ದಶಲಕ್ಷ ಡಾಲರ್ ಮೊತ್ತದ ರಕ್ಷಣಾ ಸಾಧನ ಹಾಗೂ ಸೇವೆಗಳು, ತೈವಾನ್ ಯೋಧರಿಗೆ ಮಿಲಿಟರಿ ಶಿಕ್ಷಣ ಮತ್ತು ತರಬೇತಿ ಒದಗಿಸುವ ಯೋಜನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮತಿ ನೀಡಿದ್ದರು. ಜತೆಗೆ, ಪ್ರತ್ಯೇಕವಾಗಿ 295 ದಶಲಕ್ಷ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೂ ಅಮೆರಿಕದ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಇಲಾಖೆ `ತೈವಾನ್ ಜಲಸಂಧಿಯ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುವ ಈ ಅಪಾಯಕಾರಿ ನಡೆಯನ್ನು ಹಾಗೂ ತೈವಾನ್ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಅಮೆರಿಕ ತಕ್ಷಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದೆ.
ಅಮೆರಿಕದ ಘೋಷಣೆಯನ್ನು ತೈವಾನ್ ಸ್ವಾಗತಿಸಿದ್ದು `ಇದು ತೈವಾನ್ ರಕ್ಷಣೆಗೆ ಅಮೆರಿಕದ ಬದ್ಧತೆಯನ್ನು ಸೂಚಿಸುತ್ತದೆ’ ಎಂದಿದೆ.