ಹುಟ್ಟಿನಿಂದ ಆರು ತಿಂಗಳವರೆಗೆ ಎದೆಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ‘ತಾಯಿ ಎದೆಹಾಲು ನವಜಾತ ಶಿಶುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹುಟ್ಟಿದಾಗಿನಿಂದ ಆರು ತಿಂಗಳುಗಳ ಕಾಲ ತಾಯಿಯ ಹಾಲನ್ನು ಉಣಿಸಬೇಕು’. ಕೆಲವೊಮ್ಮೆ ಎದೆಹಾಲಿನಕೊರತೆ ಅಥವಾ ಇನ್ಯಾವುದೋ ಸಮಸ್ಯೆಯಿಂದ ಮಕ್ಕಳು ಬಾಟಲಿ ಮೂಲಕ ಕುಡಿಸಬೇಕಾಗುತ್ತದೆ. ಆದರೆ ಬಾಟಲಿಯಲ್ಲಿ ಹಾಲುಣಿಸುತ್ತಿದ್ದರೆ ಅದರ ನೈರ್ಮಲ್ಯಕ್ಕೆ ವಿಶೇಷ ಗಮನ ಕೊಡುವುದು ಅತ್ಯಂತ ಅಗತ್ಯವಾಗಿರುತ್ತದೆ.
ಮಗುವಿನ ಹಾಲಿನ ಬಾಟಲಿಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಪ್ಲ್ಯಾಸ್ಟಿಕ್,ಸ್ಟೀಲ್ ಮತ್ತು ಗಾಜಿನ ಬಾಟಲಿಗಳು ಲಭ್ಯವಿವೆ. ಆದರೆ ಬಿಸಿ ಹಾಲಿಗೆ ಪ್ಲಾಸ್ಟಿಕ್ ಬಾಟಲಿ ಬಳಸುವುದು ಅಷ್ಟು ಸೂಕ್ತವಲ್ಲ. ನೀವು ಸ್ಟೀಲ್ ಅಥವಾ ಗಾಜಿನ ಬಾಟಲಿಗಳನ್ನು ಬಳಸಬಹುದು. ಗಾಲಿನ ಬಾಟಲಿ ಬೇಗ ಒಡೆದು ಹೋಗುವುದರಿಂದ ಹೆಚ್ಚಿನ ಜಾಗ್ರತೆ ವಹಿಸಿ. ಮಗುವಿಗೆ ಹಾಲು ನೀಡುವ ಮೊದಲು ಬಾಟಲಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದಲ್ಲದೆ, ಬಾಟಲಿಯನ್ನು ನೀರಿನಲ್ಲಿ ಕುದಿಸಿ ಸ್ವಚ್ಛಗೊಳಿಸಿ. ಮಗುವಿನ ಬಾಟಲ್ ಸ್ವಚ್ಛಗೊಳಿಸುವ ಬ್ರಷ್ಗಳನ್ನು ಸ್ವಚ್ಛವಾದ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಿ. ಹಾಲು ತಯಾರಿಸುವ ಮೊದಲು ಕೈಗಳನ್ನು ತೊಳೆಯಬೇಕು. ಬರಿಗಣ್ಣಿಗೆ ಕಾಣದ ಅನೇಕ ಸೂಕ್ಷ್ಮಾಣುಜೀವಿಗಳಿವೆ. ಅಲ್ಲದೆ, ಬಾಟಲಿಗೆ ಜೋಡಿಸಲಾದ ಮೊಲೆತೊಟ್ಟುಗಳನ್ನು ನಿಯಮಿತವಾಗಿ ಬದಲಾಯಿಸುತ್ತೀರಿ.
ಮಗುವನ್ನು ನಿಮ್ಮ ತೊಡೆಯ ಮೇಲೆ ಇರಿಸಿ ಮತ್ತು ತಲೆಯ ಕೆಳಗೆ ಒಂದು ಕೈಯನ್ನು ಇರಿಸಿ ಮಗುವಿಗೆ ಹಾಲುಣಿಸಿ. ಮಗು ಮಲಗಿರುವಾಗ ಯಾವುದೇ ಕಾರಣಕ್ಕೂ ಹಾಲುಣಿಸಬೇಡಿ. ಯಾಕೆಂದರೆ ಹೆಚ್ಚುವರಿ ಹಾಲು ಕೆಲವೊಮ್ಮೆ ಗಂಟಲಲ್ಲಿ ಸಿಲುಕಿ,ಮೂಗಿನಿಂದ ಹೊರಬರಬಹುದು. ಇದು ಮಗುವಿನ ಪ್ರಾಣಕ್ಕೂ ಅಪಾಯ ತಂದೊಡ್ಡಬಹುದು.