ಹುಬ್ಬಳ್ಳಿ ನ.24: ಭಾರತ ದೇಶ ಕೃಷಿ ಪ್ರಧಾನವಾದ ದೇಶ. ರೈತರ ಶ್ರಮದ ಬದುಕು ಎಲ್ಲರಿಗೂ ಗೊತ್ತಿದೆ. ರೈತ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅನ್ನ ಕೊಡುವ ರೈತನನ್ನು ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಮಧ್ಯಾಹ್ನ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್ ಉದ್ಘಾಟಿಸಿ, ಆಶೀರ್ವಚನ ನೀಡುತ್ತಿದ್ದರು.
ಎಲ್ಲರಂತೆ ರೈತರ ಬಾಳು ಉಜ್ವಲಗೊಳ್ಳಬೇಕೆಂದು ಬಯಸುವುದು ನಿಜ. ಆದರೆ ವಾಸ್ತವಿಕ ಸ್ಥಿತಿಯೇ ಬೇರೆಯಿದೆ. ಶ್ರಮ ವಹಿಸಿ ಬೆಳೆದ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗಲಾರದೇ ತೊಂದರೆಗೆ ಒಳಗಾಗುತ್ತಿದ್ದಾನೆ. ಅತೀವೃಷ್ಟಿ, ಕೆಲವೊಮ್ಮೆ ಅನಾವೃಷ್ಟಿಯಿಂದ ಬೆಳೆ ನಾಶಗೊಳ್ಳುತ್ತಿರುವುದನ್ನು ಕಾಣುತ್ತೇವೆ. ಮಾಡಿದ ಸಾಲಕ್ಕೆ ಎದೆಗುಂದಿ ಪ್ರಾಣವನ್ನೇ ಕಳೆದುಕೊಂಡವರೆಷ್ಟೋ ಜನ ರೈತರಿದ್ದಾರೆ. ಅಮೂಲ್ಯ ಜೀವ ಇದ್ದರೆ ಭವಿಷ್ಯತ್ತಿನಲ್ಲಿ ಒಳ್ಳೆಯದನ್ನು ಕಾಣಲಿಕ್ಕೆ ಸಾಧ್ಯವಿದೆ ಎಂಬ ಆಶಾಭಾವ ಇರಬೇಕೆ ಹೊರತು ರೈತರು ಆತ್ಮಹತ್ಯೆಗೆ ಮುಂದಾಗಬಾರದು ಎಂದು ನೆರೆದಿದ್ದ ರೈತರಲ್ಲಿ ಜಗದ್ಗುರುಗಳು ಆತ್ಮಸ್ಥೈರ್ಯ ತುಂಬಿದರು.
ಆಧುನಿಕ ಬೇಸಾಯವನ್ನು ರೈತರು ಬಳಸಿಕೊಂಡು ಆರ್ಥಿಕ ಗುಣಮಟ್ಟದ ಬೆಳೆ ಬೆಳೆಯಲು ಶ್ರಮಿಸಬೇಕಾಗಿದೆ. ಕೃಷಿಯಲ್ಲಿ ಹೆಚ್ಚಿನ ರಾಸಾಯನಿಕ ಬಳಸುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ ಅಲ್ಲದೇ ಹಲವು ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಯನ್ನು ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಹಿರೇಮಠದ ಗಂಗಯ್ಯ ಮತ್ತು ಚನ್ನಯ್ಯ ಸಹೋದರರು ರೈತರಿಗೆ ಉಪಯುಕ್ತವಾದ ಯಂತ್ರೋಪಕರಣಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಿಕೊಡುತ್ತಿರುವುದು ಸಂತೋಷದ ಸಂಗತಿ. ತಾಯಿ ಸುಶೀಲಮ್ಮ ಅವರು ಮಕ್ಕಳಿಗೆ ಕೊಟ್ಟ ಸಂಸ್ಕಾರ ಮತ್ತು ಕಾಯಕ ಜೀವನದ ಮಹತ್ವದ ಅರಿವು ಉಂಟು ಮಾಡಿದ ಪರಿಣಾಮದಿಂದ ಇಂಥ ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದ ಅವರು, ಒಕ್ಕಲಿಗ ಒಕ್ಕಿದರೆ ಲೋಕವೆಲ್ಲ ಉಕ್ಕುವುದು. ಒಕ್ಕಲಿಗ ಒಕ್ಕದಿದ್ದರೆ ದೇಶ ಬಿಕ್ಕುವುದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದಾರೆಂದರು.
ನಾಡಿನೆಲ್ಲೆಡೆಯಿಂದ ಆಗಮಿಸಿದ ರೈತ ಧುರೀಣರಿಗೆ ಶಾಲು, ಸ್ಮರಣಿಕೆ ನೀಡಿ ಜಗದ್ಗುರುಗಳಿಂದ ಗುರುರಕ್ಷೆ ಕೊಡಿಸಲಾಯಿತು.
ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವವನ್ನು ವಹಿಸಿ ಮಾತನಾಡಿ, ಹಿರೇಮಠದ ಸಹೋದರರು 250ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಹಮ್ಮಿಕೊಂಡು ಇನ್ನಿತರರಿಗೆ ಮಾದರಿಯಾಗಿದ್ದಾರೆ ಎಂದರು.
ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ಬಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯರು, ಹನ್ನೆರಡುಮಠದ ರೇವಣಸಿದ್ಧ ಶಿವಾಚಾರ್ಯರು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಶ್ರೀ ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್ ಸಂಸ್ಥೆಗೆ ಶ್ರೇಯಸ್ಸು ಬಯಸಿದ ಆತ್ಮೀಯ ವಲಯದ ಹತ್ತಾರು ಜನರಿಗೆ ಸ್ಮರಣಿಕೆ, ಶಾಲು, ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಕೊಡಿಸಲಾಯಿತು.
ಇದೇ ಸಂದರ್ಭದಲ್ಲಿ ದಿನಪತ್ರಿಕೆಯೊಂದರ ವಿಶೇಷ ಸಂಚಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಹಿರೇಮಠದ ಗಂಗಯ್ಯ-ಚನ್ನಯ್ಯ ಸಹೋದರರಿಗೆ ಮತ್ತು ಪರಿವಾರದವರಿಗೆ ಶಾಲು ಹೊದಿಸಿ ಸ್ಮರಣಿಕೆಯಿತ್ತು, ಶುಭ ಹಾರೈಸಿದರು.
ವೀರಯ್ಯ ಹಿರೇಮಠ ಸ್ವಾಗತಿಸಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್ ನೂತನ ಕಟ್ಟಡದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರು ಸಕಲರ ಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ, ಬಂದ ಭಕ್ತರಿಗೆ ಆಶೀರ್ವದಿಸಿದರು.
ಸಮಾರಂಭದ ನಂತರ, ಧರ್ಮಸಭೆಗೆ ಆಗಮಿಸಿದ್ದ ಎಲ್ಲ ಸದ್ಭಕ್ತರಿಗೂ ಅನ್ನ ದಾಸೋಹ ನೆರವೇರಿತು.