ವಾಷಿಂಗ್ಟನ್ : ಜನವರಿ ತಿಂಗಳಲ್ಲಿ ಅಮೆರಿಕ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಗಣ್ಯರಿಗೆ ಟ್ರಂಪ್ ಆಹ್ವಾನ ನೀಡಿದ್ದಾರೆ. ಇದೀಗ ತಮ್ಮ ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ರನ್ನು ಡೊನಾಲ್ಡ್ ಟ್ರಂಪ್ ಆಹ್ವಾನಿಸಿದ್ದಾರೆ.
ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಚೀನಾದ ವಿರುದ್ಧ ಹೊಸ ಸುಂಕ ವಿಧಿಸುವ ಬೆದರಿಕೆ ಒಡ್ಡಿದ್ದ ಟ್ರಂಪ್, ಇದೀಗ ಚೀನಾದ ಜೊತೆಗಿನ ಸಂಬಂಧ ಸುಧಾರಿಸಲು ಪ್ರಯತ್ನಿಸುತ್ತಿರಬಹುದು ಎಂದು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.
ಆದರೆ ಟ್ರಂಪ್ ಆಹ್ವಾನವನ್ನು ಜಿಂಪಿಂಗ್ ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಇದುವರೆಗೆ ಚೀನಾದ ಯಾವುದೇ ನಾಯಕರು ಅಮೆರಿಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಚೀನಾದ ರಾಯಭಾರಿಗಳು ಮಾತ್ರವೇ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಟ್ರಂಪ್ ಆಹ್ವಾನವನ್ನು ಕ್ಸಿ ಜಿಂಪಿಂಗ್ ನಿರಾಕರಿಸುವ ಸಾಧ್ಯತೆ ದಟ್ಟವಾಗಿದೆ.
ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಅವರನ್ನು ಅಭಿನಂದಿಸಿದ್ದ ಕ್ಸಿಜಿಂಪಿಂಗ್, ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಸ್ಥಿರವಾಗಿಡಲು ಬಯಸುವುದಾಗಿ ಹೇಳಿದ್ದರು.