ಸ್ಯಾಂಡಲ್ ವುಡ್ ಸ್ಟಾರ್ ನಟ ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಜೊತೆ ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಲಿ ಮದುವೆಯನ್ನು ಹಲವರು ಹೊಗಳುತ್ತಿದ್ದರೆ ಇನ್ನೂ ಕೆಲವರು ಲೇವಡಿ ಮಾಡಿದ್ದಾರೆ. ‘‘ಬುದ್ಧ, ಬಸವ ಅಂದುಕೊಂಡಿದ್ದ ಡಾಲಿ, ಸಾಂಪ್ರದಾಯಿಕ ಆಚರಣೆಗಳ ಮೂಲಕ ಮದುವೆ ಆಗಿದ್ದಾರೆ. ಅಷ್ಟೆಲ್ಲ ಮಾತನಾಡುತ್ತಿದ್ದ ಧನಂಜಯ ಯಾಕೆ ಮಂತ್ರ ಮಾಂಗಲ್ಯ ಆಗಿಲ್ಲ? ಯಾಕೆ ಸಾಂಪ್ರದಾಯದ ಮೊರೆ ಹೋಗಿದ್ದು..’’ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ಇದೀಗ ಮದುವೆಗಾಗಿ ಆಚರಿಸಿದ ಸಂಪ್ರದಾಯದ ಬಗ್ಗೆ ಧನಂಜಯ್ ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಧನಂಜಯ.. ಹಿರಿಯರಿಗೆ ಕೆಲವು ನಂಬಿಕೆಗಳಿಂದ ಖುಷಿ ಸಿಗುತ್ತೆ ಅಂತಾದರೆ ಅದನ್ನು ಪಾಲಿಸುವುದು ತಪ್ಪು ಅಂತಾ ನನಗೆ ಅನಿಸಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಬರಲ್ಲ. ಆದರೆ ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಮಾತನಾಡುತ್ತೇನೆ.
ಕಾಯುವಂತಹ ನಂಬಿಕೆಗಳು ಬೇರೆ. ಮೂಢನಂಬಿಕೆಗಳು ಬೇರೆ. ಆಚರಣೆ ಅಂತಾ ಬಂದಾಗ ನಮ್ಮ ಸಮಾಜದಲ್ಲಿ ತುಂಬಾ ತರಹದ ಆಚರಣೆಗಳಿವೆ. ಉದಾಹರಣೆಗೆ ನಮ್ಮ ಚಿಕ್ಕಪ್ಪ ಮದುವೆ ಸಂದರ್ಭದಲ್ಲಿ ಕೊಂಡ ಹಾಯುವ ಪೂಜೆ ಮಾಡಿದರು. ಅದನ್ನ ಯಾರು ಯಾವ್ಯಾವ ಪದ್ದತಿಯಲ್ಲಿ ಮಾಡೋದು ಅಂತಾ ಗೊತ್ತಿಲ್ಲ. ನಮ್ಮ ಚಿಕ್ಕಪ್ಪ ತುಂಬಾನೇ ಚೆನ್ನಾಗಿ ಮಾಡಿದರು.
ಕೊಂಡ ಹಾಯೋದನ್ನು ನಾನು ತುಂಬಾ ಚಿಕ್ಕವನಿಂದಲೂ ನೋಡಿಕೊಂಡು ಬಂದಿದ್ದೇನೆ. ಜಾತ್ರೆಯ ಜನಸಾಗರದಲ್ಲಿ ನಿಂತು ಎಂಜಾಯ್ ಮಾಡಿದ್ದೇನೆ. ನನಗೆ ಅದು ಜಾನಪದ. ಅಲ್ಲಿ ನನಗೆ ತಪ್ಪು ಕಂಡು ಬಂದಿಲ್ಲ. ನಾನು ವಿಜ್ಞಾನ ನಂಬುತ್ತೇನೆ, ನನ್ನ ಸೈನ್ಸ್ ನನಗೆ ಗೊತ್ತು. ನನ್ನ ಜೀವನದ ಕತೆಯೊಂದನ್ನು ನಿಮಗೆ ಹೇಳುತ್ತೇನೆ. ನನ್ನ ತಾಯಿಗೆ ಒಂದು ಆಪರೇಷನ್ ನಡೆದಿತ್ತು. ಸೈನ್ಸ್ ಪ್ರಕಾರ ಅದೊಂದು ಸಣ್ಣ ಶಸ್ತ್ರಚಿಕಿತ್ಸೆ ಅಷ್ಟೇ. ಆದರೆ, ನನ್ನ ತಾಯಿ ಆಕೆ ನಂಬುವ ಜೇನುಕಲ್ಲ ಸಿದ್ದಪ್ಪನನ್ನು ಆ ಅವಧಿಯಲ್ಲಿ ಸ್ಮರಿಸುತ್ತಿದ್ದರು. ಆಪರೇಷನ್ ಥಿಯೇಟರ್ಗೆ ಹೋಗುವ ಸಂದರ್ಭದಲ್ಲಿ ಜೇನುಕಲ್ಲ ಸಿದ್ದಪ್ಪ ಎಂದು ಜಪಿಸುತ್ತಿದ್ದರು. ಅದು ಅವರ ನಂಬಿಕೆ. ಅದೊಂದು ಶಕ್ತಿ ಎಂದರು.
ಇಲ್ಲಿ ಎಲ್ಲವನ್ನೂ ಒಂದೇ ರೀತಿ ನೋಡೋಕೆ ಆಗಲ್ಲ. ಒಂದೇ ರೀತಿ ನೋಡಿದಾಗ ನಾವು, ನೀವು ಒಟ್ಟಿಗೆ ಹೋಗೋಕೆ ಸಾಧ್ಯವೇ ಇಲ್ಲ. ನನ್ನ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಗೌರವಿಸುತ್ತೇನೆ. ನನ್ನನ್ನು ಪ್ರಶ್ನೆ ಮಾಡ್ತಿರೋರಿಗೂ ಧನ್ಯವಾದ ತಿಳಿಸುತ್ತೇನೆ. ನನಗೆ ನಿಮ್ಮ ಆಶೀರ್ವಾದ ಬೇಕು. ನಾನು ಕೂಡ ಕಲಿಯುತ್ತ ಇರುತ್ತೇನೆ ಎಂದಿದ್ದಾರೆ.