ದೇಹದಲ್ಲಿನ ಮೂಳೆಗಳು ಬಲಿಷ್ಠವಾಗಿ ಇರಬೇಕಾದರೆ, ಪೋಷ ಕಾಂಶಗಳು ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡಬೇಕು. ಒಂದು ವೇಳೆ ಮೂಳೆಗಳಿಗೆ ಬೇಕಾಗುವ, ಪೋಷಕಾಂಶಗಳ ಕೊರತೆ ಕಂಡು ಬಂದರೆ, ಅದರಿಂದ, ದೀರ್ಘಕಾಲಿಕ ಗಂಟು ನೋವು, ಕಾಲು ನೋವು, ಅಥವಾ ಸಣ್ಣ ಪುಟ್ಟ ಏಟಿಗೆ ಮೂಳೆ ಮುರಿತದಂತಹ ಸಮಸ್ಯೆ ಕಾಡುವ ಸಮಸ್ಯೆ ಕಂಡು ಬರುತ್ತದೆ.
ನಗರ ಜೀವನ, ಒತ್ತಡ, ಹೊರಗಿನ ಅನಾರೋಗ್ಯಕರ ಊಟ, ತಿಂಡಿ, ಕಾರ್ಬೋನೇಟೆಡ್ ಪಾನೀಯ ಸೇವನೆ, ಅನಾರೋಗ್ಯಕರ ಜೀವನಶೈಲಿ ಇದೆಲ್ಲವೂ ಮೂಳೆ ಆರೋಗ್ಯ ಹಾಳು ಮಾಡುತ್ತದೆ. ಇದರಿಂದಾಗಿ ವಯಸ್ಸಾಗುತ್ತಿದ್ದಂತೆ ಅಥವಾ ಅಕಾಲಿಕ ಮೂಳೆ ನೋವು ಶುರುವಾಗುತ್ತದೆ.
ಆರೋಗ್ಯಕರ ಮೂಳೆ ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಹೀಗಿವೆ. ಆರೋಗ್ಯಕರ ಆಹಾರ ಸೇವಿಸಿ. ಬಲವಾದ ಮೂಳೆಗಳಿಗೆ ಸಮತೋಲಿತ, ಪೌಷ್ಟಿಕ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧ ಆಹಾರ ಸೇವನೆ ಮಾಡಿ. ಡೈರಿ ಉತ್ಪನ್ನಗಳು, ಸಮುದ್ರಾಹಾರ ಮತ್ತು ಹಸಿರು ತರಕಾರಿ ಸೇವಿಸಿ. ಇದು ಮೂಳೆ ನೋವು ಮತ್ತು ಮುರಿತ ಅಪಾಯ ಕಡಿಮೆ ಮಾಡುತ್ತದೆ.
ದಿನವೂ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡಿ. ಇದು ಮೂಳೆಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಮೂಳೆ ಸಾಂದ್ರತೆ ಹೆಚ್ಚಿಸುತ್ತದೆ. ಸ್ನಾಯುಗಳನ್ನು ನಿರ್ಮಿಸುತ್ತದೆ. ನಡಿಗೆ, ಓಟ ಮತ್ತು ತೂಕದ ತರಬೇತಿ, ದೈಹಿಕ ಚಟುವಟಿಕೆ ಮೂಳೆಯ ನಷ್ಟವನ್ನು ಕಡಿಮೆ ಮಾಡಲು ದೇಹವನ್ನು ಉತ್ತೇಜಿಸುತ್ತದೆ.
ಮದ್ಯಪಾನ ಮತ್ತು ಧೂಮಪಾನ ತ್ಯಜಿಸಿ. ಅತಿಯಾದ ಮದ್ಯಪಾನ ಮತ್ತು ಧೂಮಪಾನ ಮೂಳೆಯ ಆರೋಗ್ಯ ಕೆಡಿಸುತ್ತದೆ. ಧೂಮಪಾನವು ದೇಹವನ್ನು ದುರ್ಬಲಗೊಳಿಸುತ್ತದೆ. ಆರೋಗ್ಯಕರ ಮೂಳೆಗಳಿಗೆ ಧೂಮಪಾನ, ಆಲ್ಕೊಹಾಲ್ ಸೇವನೆ ಕಡಿಮೆ ಮಾಡಿ. ಆರೋಗ್ಯಕರ ತೂಕ ಕಾಪಾಡಿಕೊಳ್ಳಿ.
ಆರೋಗ್ಯಕರ ದೇಹದ ತೂಕವು ಮೂಳೆಗಳ ಆರೋಗ್ಯ ಕಾಪಾಡುತ್ತದೆ. ಅಧಿಕ ತೂಕವು ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ದೇಹದ ತೂಕವು ಮೂಳೆ ಸಾಂದ್ರತೆ ಕಡಿಮೆ ಮಾಡುತ್ತದೆ. ಅಧಿಕ ತೂಕವು ಮೂಳೆಯ ಗುಣಮಟ್ಟಕ್ಕೆ ಧಕ್ಕೆ ತರುತ್ತದೆ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ. ಇದು ಮೂಳೆಯ ಆರೋಗ್ಯ ಕಾಪಾಡುತ್ತದೆ.