ಸಸ್ಯಗಳು ಪರಿಸರಕ್ಕೆ ಮಾತ್ರವಲ್ಲ, ಮನುಷ್ಯರಿಗೂ ಸಹ ಬಹಳ ಪ್ರಯೋಜನಕಾರಿ. ಈ ಗಿಡಗಳು ನಮ್ಮ ಜೀವನದ ಒಂದು ಭಾಗವಾಗಿದೆ. ಇಂಗ್ಲಿಷ್ನಲ್ಲಿ ಜಾಸ್ಮೀನ್ ಎಂದು ಕರೆಯಲ್ಪಡುವ ಮಲ್ಲಿಗೆ ದೀರ್ಘಕಾಲಿಕ ಪುಷ್ಪ ಬೆಳೆ. ಇದನ್ನು ಪೂಜೆಗೆ, ಮುಡಿಯಲು ಮಾತ್ರವಲ್ಲದೆ, ಸುಗಂಧಿತ ತೈಲ, ಅತ್ತರ್ ತಯಾರಿಸಲೂ ಬಳಸಲಾಗುತ್ತದೆ. ಪರಿಮಳ ಬೀರುವಂತ ಒಂದು ಹೂವಾಗಿದೆ. ಬಿಳಿ ಬಣ್ಣದಲ್ಲಿರುವ ಈ ಹೂವು ಹೆಚ್ಚಿನ ಮಹಿಳೆಯರ ಪ್ರೀಯವಾದ ಹೂವಾಗಿದೆ.
ಕೆಲವರು ದುಂಡು ಮಲ್ಲಿಗೆಯನ್ನು ಮನೆಯಲ್ಲೂ ಬೆಳೆಸುತ್ತಾರೆ. ಒಂದೆರಡು ಮಳೆ ಬೀಳಲು ಆರಂಭಿಸಿದ್ದೇ ದುಂಡು ಮಲ್ಲಿಗೆಯ ಮೊಗ್ಗು ಕಾಣಿಸಿಕೊಳ್ಳಲಾರಂಭಿಸುತ್ತದೆ. ನೀವೂ ಕೂಡಾ ಮನೆಯಲ್ಲಿ ದುಂಡು ಮಲ್ಲಿಗೆಯ ಗಿಡವನ್ನು ಬೆಳೆಸಿದ್ದೀರಾದರೆ ಅದು ಚೆನ್ನಾಗಿ ಹೂವು ಕೊಡುವಂತೆ ಮಾಡಲು ಇಲ್ಲಿದೆ ಕೆಲವು ಟಿಪ್ಸ್.
ಮಲ್ಲಿಗೆ ಗಿಡವನ್ನು ಸೂರ್ಯನ ಬಿಸಿಲಿನಲ್ಲಿ ಇಡಿ
ನಿಮ್ಮ ಮನೆಯ ಒಳಗೆ ಮಲ್ಲಿಗೆ ಗಿಡವನ್ನು ಇಟ್ಟುಕೊಂಡಿರುವಿರಾದರೆ, ನೀವು ಅದನ್ನು ಹೊರಗೆ ಸೂರ್ಯನ ಬೆಳಕಿನಲ್ಲಿ ನಿತ್ಯವೂ 5 ರಿಂದ 6 ಗಂಟೆಗಳ ಕಾಲ ಇಡುವುದು ಅತ್ಯಗತ್ಯ. ನೀವು ಕೇವಲ 1 ರಿಂದ 2 ಗಂಟೆಗಳ ಕಾಲ ಇಟ್ಟರೆ, ನಿಮ್ಮ ಮಲ್ಲಿಗೆ ಗಿಡ ಸಾಕಷ್ಟು ಹೂವು ಬಿಡುವುದಿಲ್ಲ.
ಪ್ಲಾಸ್ಟಿಕ್ ಕುಂಡಗಳಲ್ಲಿ ಇಡಬೇಡಿ
ಮಲ್ಲಿಗೆ ಗಿಡಗಳನ್ನು ಪ್ಲಾಸ್ಟಿಕ್ ಕುಂಡಗಳಲ್ಲಿ ಇಡಲು ಹೋಗಬೇಡಿ. ಏಕೆಂದರೆ, ಆ ಗಿಡಗಳನ್ನು ಬಿಸಿಲಿನಲ್ಲಿ ಇಡಬೇಕಾದ ಕಾರಣ, ಕುಂಡಗಳು ಬಿಸಿಯಾಗುತ್ತದೆ. ಅದರಿಂದ ಬೇರುಗಳಿಗೆ ಹಾನಿಯಾಗುತ್ತದೆ ಮತ್ತು ಸಸ್ಯಗಳು ಒಣಗಿ ಹೋಗುತ್ತವೆ.
ಬಹಳಷ್ಟು ಪೋಷಕಾಂಶಗಳ ಅಗತ್ಯ
ಮಲ್ಲಿಗೆ ಹೂಗಳಿಗೆ ಸಾಕಷ್ಟು ಪೋಷಕಾಂಶಗಳ ಅಗತ್ಯ ಇರುತ್ತದೆ. ಆದ್ದರಿಂದ ನೀವು ಅದನ್ನು ನೆಡುವಾಗ, ಮಣ್ಣಿನೊಂದಿಗೆ ಎರೆಹುಳು ಗೊಬ್ಬರಕ್ಕೆ ಶೇಕಡಾ 50 ರಷ್ಟು ಸೆಗಣಿಯನ್ನು ಮಿಶ್ರ ಮಾಡಬೇಕು. ತಿಂಗಳಿಗೊಮ್ಮೆ ಕುಂಡಕ್ಕೆ ಗೊಬ್ಬರವನ್ನು ಸೇರಿಸಬೇಕು. ಅಲ್ಲದೆ ನಾಟಿ ಮಾಡಲು ಮಣ್ಣನ್ನು ಸಿದ್ಧಪಡಿಸುವಾಗ, ತೋಟದ ಮಣ್ಣಿಗೆ ಶೇಕಡಾ 50 ರಷ್ಟು ಸೆಗಣಿ, ಶೇಕಡಾ 15 ರಷ್ಟು ಮರಳು, ಶೇಕಡಾ 10 ರಷ್ಟು ಕೋಕೋಪೀಟನ್ನು ಸೇರಿಸಬೇಕು.
ಮಲ್ಲಿಗೆ ಹೂವಿನ ವಿಂಗಡನೆ ಅಗತ್ಯ
ಮಲ್ಲಿಗೆ ಮೊಗ್ಗು ಅರಳಿ, ಉದುರಿದಾಗ ಅದರ ಬೀಜಕೋಶ ಹಾಗೆಯೇ ಉಳಿಯುತ್ತದೆ. ನಾವು ಮಲ್ಲಿಗೆ ಗಿಡದ ಕೊಂಬೆಯ ಭಾಗದಲ್ಲಿ ಎರಡು ಎಲೆಗಳ ಮಧ್ಯದ ತೊಟ್ಟನ್ನು ಮತ್ತು ಬೀಜಕೋಶವನ್ನು ಕತ್ತರಿಸಿ ತೆಗೆಯಬೇಕು. ಹಾಗಂತ ಹೆಚ್ಚು ಉದ್ದ ಕತ್ತರಿಸಲು ಹೋಗಬೇಡಿ. ಕೇವಲ ಹೂವುಗಳು ಅರಳಿ, ಉದುರಿದ ಬಳಿಕ ಆ ಜಾಗದ ಸಣ್ಣ ತೊಟ್ಟನ್ನು ಮಾತ್ರ ಕಿತ್ತು ತೆಗೆದರೆ ಸಾಕು. ಹಾಗೆ ಮಾಡುವುದರಿಂದ ಹೊಸ ಕೊಂಬೆಗಳು ಬಹಳ ಬೇಗ ಬೇಳೆಯುತ್ತವೆ ಮತ್ತು ಸಾಕಷ್ಟು ಹೂಗಳನ್ನು ಕೂಡ ಬೀಡುತ್ತವೆ.
ಎಪ್ಸಮ್ ಉಪ್ಪು ಸೇರಿಸಿ
ಎರಡು ಲೀಟರ್ ನೀರಿಗೆ ಒಂದು ಟೀ ಚಮಚ ಎಪ್ಸಮ್ ಉಪ್ಪು ಸೇರಿಸಿ, ಕದಡಿ. ಮತ್ತು ಆ ಗಿಡಗಳಿಗೆ ಸುರಿಯಿರಿ. ನೀವು ಸ್ಪ್ರೇ ಬಾಟಲಿನಿಂದ ನೀರನ್ನು ಗಿಡಗಳಿಗೆ ಸಿಂಪಡಿಸಿದರೆ ಇನ್ನೂ ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ಮಲ್ಲಿಗೆ ಗಿಡ ಚೆನ್ನಾಗಿ ಹೂ ಕೊಡುತ್ತದೆ. ಕೇವಲ 15 ದಿನಗಳಲ್ಲೇ ನಿಮ್ಮ ಗಿಡದಲ್ಲಿ ವ್ಯತ್ಯಾಸ ಕಾಣುವಿರಿ.
ಗಿಡ ಒಣಗದಂತೆ ನೋಡಿಕೊಳ್ಳಿ
ನಿಮ್ಮ ಮಲ್ಲಿಗೆ ಗಿಡ ಬದುಕಬೇಕು ಮತ್ತು ಚೆನ್ನಾಗಿ ಹೂ ಬಿಡಬೇಕು ಎಂದಾದಲ್ಲಿ, ಅದರ ಬುಡದ ಮಣ್ಣನ್ನು ಒಣಗಲು ಬಿಡಬೇಡಿ. ನಿಮ್ಮ ಗಿಡ ಇಡೀ ದಿನ ಸೂರ್ಯನ ಬಿಸಿಲಿನಲ್ಲಿ ಇರುತ್ತದೆ. ಹಾಗಾಗಿ, ಅದಕ್ಕೆ ನಿತ್ಯವೂ ತಪ್ಪದೆ ನೀರು ಹಾಕುವುದು ಅತ್ಯಗತ್ಯ. ಹಾಗಂತ ಅತಿಯಾಗಿ ನೀರು ಹಾಕುವ ಅಗತ್ಯ ಕೂಡ ಇಲ್ಲ. ಈ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ನಿಮ್ಮ ಮಲ್ಲಿಗೆ ಗಿಡ ಕೇವಲ ಹೆಚ್ಚು ಹೂಗಳನ್ನು ಬಿಡುವುದು ಮಾತ್ರವಲ್ಲ, ಆರೋಗ್ಯವಾಗಿ ಕೂಡ ಇರುತ್ತದೆ.