ಕೆಲವರಿಗೆ ರಾತ್ರಿ ಮಲಗುವಾಗ ಕಾಲಿನಿಂದ ತಲೆಯವರೆಗೇ ಬೆಡ್ ಶೀಟ್ ಹೊದ್ದು ಮಲಗುವ ಅಭ್ಯಾಸವಿರುತ್ತದೆ. ನಿದ್ದೆ ಮಾಡುವುದು ಆರೋಗ್ಯಕ್ಕೆ ಅತೀ ಅಗತ್ಯ. ಆದರೆ ನಿದ್ದೆ ಮಾಡುವ ಭಂಗಿ, ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಕೆಲವೊಬ್ಬರು ಅಂಗಾತ ಮಲಗಿದರೆ, ಇನ್ನು ಕೆಲವರು ಗೋಡೆಗೆ ಮುಖ ಮಾಡಿ ಮಲಗುತ್ತಾರೆ. ಇದಲ್ಲದೆ ಕೆಲವೊಬ್ಬರು ಪೂರ್ತಿ ಮುಸುಕು ಹಾಕಿ ಮಲಗಿದರೆ, ಇನ್ನು ಕೆಲವರಿಗೆ ಹೊದಿಕೆಯನ್ನು ಹೊದ್ದುಕೊಂಡ್ರೆ ನಿದ್ದೇನೆ ಬರೋದಿಲ್ಲ. ಆದ್ರೆ ನೀವು ಮಲಗುವುದಷ್ಟೇ ಅಲ್ಲ, ಯಾವ ರೀತಿ ಮಲಗುತ್ತೀರಿ ಅನ್ನೋದು ಸಹ ಮುಖ್ಯವಾಗುತ್ತದೆ.
ಆದರೆ ಈ ರೀತಿ ಮಲಗುವುದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ರೀತಿ ಮಲಗುವ ಅಭ್ಯಾಸದಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂದು ತಿಳಿದುಕೊಳ್ಳುವುದು ಸೂಕ್ತ.
ಚರ್ಮಕ್ಕೆ ಹಾನಿಕಾರಕ : ಚಳಿಗಾಲದ ಋತುವಿನಲ್ಲಿ ಮುಖಕ್ಕೆ ಬೆಡ್ ಶೀಟ್ ಹಾಕಿ ಮಲಗುವುದರಿಂದ, ಈ ಹೊದಿಕೆಯಲ್ಲಿರುವ ಅಶುದ್ಧ ಗಾಳಿ ಹೊರಗೆ ಹೋಗುವುದಿಲ್ಲ. ಈ ಕೆಟ್ಟ ಗಾಳಿಯಿಂದ ತ್ವಚೆಯ ಬಣ್ಣ ಮಾಸುವಂತೆ ಮಾಡುತ್ತದೆ. ಸುಕ್ಕುಗಳು, ಮೊಡವೆಗಳು ಸೇರಿದಂತೆ ಇನ್ನಿತ್ತರ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.
ಶ್ವಾಸಕೋಶದ ಸಮಸ್ಯೆ : ಮುಖವನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಶ್ವಾಸಕೋಶಕ್ಕೆ ಗಾಳಿ ಸಿಗುವುದಿಲ್ಲ. ಇದರಿಂದ ಶ್ವಾಸಕೋಶಗಳು ಸಂಕುಚಿತಗೊಳ್ಳುತ್ತವೆ. ತಜ್ಞರು ಹೇಳುವಂತೆ ಈ ರೀತಿಯ ಅಭ್ಯಾಸದಿಂದ ಕ್ರಮೇಣವಾಗಿ ತಲೆನೋವು ಮತ್ತು ಅಸ್ತಮಾದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ : ಹೊದಿಕೆ ಹೊದ್ದು ಮಲಗುವುದರಿಂದ ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುವುದಿಲ್ಲ. ದೇಹದ ಪ್ರತಿಯೊಂದು ರಕ್ತವು ಸರಿಯಾದ ಪ್ರಮಾಣದಲ್ಲಿ ಹರಿಯುವುದಿಲ್ಲ.
ಆಯಾಸ : ಮುಖದ ಮೇಲೆ ಹೊದಿಕೆ ಹಾಕಿಕೊಂಡು ಮಲಗಿದರೆ ಆಮ್ಲಜನಕವು ಸರಿಯಾಗಿ ಸಿಗುವುದಿಲ್ಲ. ಇದರಿಂದ ಅತಿಯಾದ ಆಯಾಸ, ಸುಸ್ತು ಉಂಟಾಗುತ್ತದೆ. ಅದಲ್ಲದೇ, ತಲೆನೋವು, ವಾಕರಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಕೂದಲು ಉದುರುವಿಕೆ ಸಮಸ್ಯೆ : ತಲೆಯನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
ನಿದ್ರೆಗೆ ತೊಂದರೆ : ಕಾಲಿನಿಂದ ತಲೆಯವರೆಗೆ ಹೊದಿಕೆ ಹೊದ್ದು ಮಲಗುವ ಅಭ್ಯಾಸದಿಂದ ದೇಹದ ಉಷ್ಣತೆಯೂ ಹೆಚ್ಚಾಗಿ ಇದರಿಂದ ದೇಹವು ಬೆವರಲು ಪ್ರಾರಂಭವಾಗುತ್ತದೆ. ಇದರಿಂದ ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ.