ಮನುಷ್ಯನಿಗೆ ನಿದ್ದೆ ತುಂಬಾ ಮುಖ್ಯ. ಒಬ್ಬ ಮನುಷ್ಯ 6 ರಿಂದ 8 ತಾಸುಗಳ ಕಾಲ ಆದ್ರೂ ಮಲಗಿ ವಿಶ್ರಾಂತಿ ಮಾಡಬೇಕು. ನಮ್ಮ ದೇಹವು ಒಂದು ಯಂತ್ರವಿದ್ದಂತೆ, ದಿನ ಪೂರ್ತಿ ನಮ್ಮ ಕಣ್ಣು, ಕಾಲು, ಕೈ, ಕಿವಿ, ನಾಲಿಗೆ, ಮೆದುಳು, ಹೃದಯ ಬಡಿತ, ತೀವ್ರ ರಕ್ತ ಸಂಚಲನೆ, ಹೆಚ್ಚು ಉಸಿರಾಡುವ ಶ್ವಾಸಕೋಶ, ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ ಇರುತ್ತದೆ. ನಿದ್ರೆ ಹಾಗೂ ಆರೋಗ್ಯಕ್ಕೆ ನೇರ ಸಂಬಂಧವಿದೆ, ರಾತ್ರಿಯ ನಿದ್ರೆ ಉತ್ತಮವಾಗಿದ್ದರೆ ಇಡೀ ದಿನ ನಿಮ್ಮ ಮನಸ್ಸು ಕೂಡ ಚೈತನ್ಯದಿಂದ ಕೂಡಿರುತ್ತದೆ.
ನಿದ್ರಾಹೀನತೆಯು ಹೃದಯಕ್ಕೆ ಹಾನಿಯಾಗುವ ಅನಾರೋಗ್ಯಕರ ಅಭ್ಯಾಸಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.
- ಪ್ರತಿ ರಾತ್ರಿ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ವಯಸ್ಕರಲ್ಲಿ ಹೃದಯಾಘಾತ ಮತ್ತು ಖಿನ್ನತೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
- ಇದಲ್ಲದೆ, ನಿಯಮಿತ ನಿದ್ರೆಯ ಕೊರತೆಯು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯ ವೈಫಲ್ಯ ಮತ್ತು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಹೆಚ್ಚಿನ ವಯಸ್ಕರಿಗೆ ಪ್ರತಿ ರಾತ್ರಿ 7ರಿಂದ 9 ಗಂಟೆಗಳ ನಿದ್ರೆಯನ್ನು ಶಿಫಾರಸು ಮಾಡಿದೆ.
- ದೆಹಲಿಯ ಓಖ್ಲಾದಲ್ಲಿರುವ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ಕನ್ಸಲ್ಟೆಂಟ್ ನಾನ್-ಇನ್ವೇಸಿವ್ ಕಾರ್ಡಿಯಾಲಜಿಸ್ಟ್ ಡಾ. ಮೋಹಿತ್ ಟಂಡನ್, ನಿದ್ರೆಯ ಸಮಯದಲ್ಲಿ ನಿಮ್ಮ ದೇಹವು ತನ್ನನ್ನು ತಾನೇ ರಿಪೇರಿ ಮಾಡುತ್ತದೆ. ನಿಮ್ಮ ರಕ್ತದೊತ್ತಡ, ಹೃದಯ ಬಡಿತ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳು ಸೇರಿದಂತೆ ವಿವಿಧ ಕಾರ್ಯಗಳನ್ನು ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.
- “ನೀವು ಸಾಕಷ್ಟು ನಿದ್ರೆ ಪಡೆಯದಿದ್ದರೆ ನಿಮ್ಮ ದೇಹವು ಹೆಚ್ಚು ಒತ್ತಡದ ಹಾರ್ಮೋನ್ಗಳನ್ನು ಉತ್ಪಾದಿಸುತ್ತದೆ. ಅದು ನಿಮ್ಮ ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ಆಗ ನಿಮ್ಮ ರಕ್ತದೊತ್ತಡ ಹೆಚ್ಚಾಗುತ್ತದೆ” ಎಂದು ಡಾ. ಮೋಹಿತ್ ಟಂಡನ್ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
- ನೀವು ಸಾಕಷ್ಟು ನಿದ್ರೆ ಮಾಡದಿದ್ದಾಗ ಅಥವಾ ಕಳಪೆ ಗುಣಮಟ್ಟದ ನಿದ್ರೆಯನ್ನು ಮಾಡುವಾಗ ನಿಮ್ಮ ಹೃದಯ ಮತ್ತು ರಕ್ತನಾಳಗಳು ವಿಶ್ರಾಂತಿ ಪಡೆಯಲು ಅವಕಾಶ ಸಿಗುವುದಿಲ್ಲ. ಇದು ದೀರ್ಘಕಾಲದ ಉರಿಯೂತ, ಆಕ್ಸಿಡೇಟಿವ್ ಒತ್ತಡ ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಇದು ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
- ನಿದ್ರಾಹೀನತೆಯಿಂದ ತೂಕ ಹೆಚ್ಚಾಗುವುದರ ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ.
ಜನರ ನಿದ್ರೆ ಏಕೆ ಕಡಿಮೆಯಾಗುತ್ತದೆ?
*ಕಳಪೆ ಜೀವನಶೈಲಿ, ತಡರಾತ್ರಿಯವರೆಗೆ ಎಚ್ಚರವಾಗಿರುವುದು
*ರಾತ್ರಿಯಿಡೀ ಮೊಬೈಲ್ ಮತ್ತು ಟಿವಿ ನೋಡುವ ಅಭ್ಯಾಸವು ನಿಮ್ಮ ನಿದ್ರೆಗೆ ಭಂಗ ತರಬಹುದು.
*ಧೂಮಪಾನ ಮತ್ತು ಮದ್ಯಪಾನವು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು.
*ಆತಂಕ, ಖಿನ್ನತೆ ಮತ್ತು ಸ್ಲೀಪ್ ಅಪ್ನಿಯಾ ಸಮಸ್ಯೆಗಳು ನಿದ್ರೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತವೆ.
*ರಾತ್ರಿ ಪಾಳಿಯಲ್ಲಿ ಅತಿಯಾಗಿ ತಿನ್ನುವುದು ಉತ್ತಮ ನಿದ್ರೆಗೆ ಅಡ್ಡಿಯಾಗುತ್ತದೆ.
ನಿಮ್ಮ ನಿದ್ರೆಯನ್ನು ಸುಧಾರಿಸುವುದು ಹೇಗೆ?
*ರಾತ್ರಿ ಸಮಯದಲ್ಲಿ ಲಘು ಆಹಾರವನ್ನು ತೆಗೆದುಕೊಳ್ಳಬೇಕು
*ರಾತ್ರಿಯಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ
*ತಡರಾತ್ರಿಯ ವರೆಗೆ ಮೊಬೈಲ್ ಅಥವಾ ಟಿವಿ ನೋಡಬೇಡಿ
*ಒತ್ತಡ ಕಡಿಮೆ ಮಾಡಿಕೊಳ್ಳಿ
*ರಾತ್ರಿ ಬೇಗನೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ
*ಮಲಗುವಾಗ ದೀಪಗಳನ್ನು ಮಸುಕಾಗಿಸುವುದು, ಲಘು ಸಂಗೀತವನ್ನು ನುಡಿಸುವುದು, ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.