ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಾಮಾನ್ಯವಾದ ಸಮಸ್ಯೆಯಾಗಿದೆ. ಜಾಸ್ತಿ ನೀರನ್ನು ಕುಡಿಯದೇ ಇರುವುದು, ಹೆಚ್ಚಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸದಿರುವುದು, ದೈಹಿಕ ಚಟುವಟಿಕೆಯ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಕೆಲವೊಮ್ಮೆ ಕೆಲ ಔಷಧಿಗಳು ಕೂಡ ಮಲಬದ್ಧತೆಗೆ ಕಾರಣವಾಗಬಹುದು.
ಮಲಬದ್ಧತೆಯನ್ನು ತಡೆಗಟ್ಟಲು ಅನೇಕ ಮಂದಿಗೆ ಹೈಡ್ರೀಕರಿಸಿದ ಆಹಾರ ಸೇವಿಸಲು ಸಲಹೆ ನೀಡಲಾಗುತ್ತದೆ. ಅಲ್ಲದೇ ಸಾಕಷ್ಟು ಫೈಬರ್ ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಮಲಬದ್ಧತೆ ಸಮಸ್ಯೆಯು ನಮ್ಮ ಆಹಾರ ಕ್ರಮ, ಜೀವನಶೈಲಿ, ಒತ್ತಡ, ನಿರ್ಜಲೀಕರಣ, ಹೊಟ್ಟೆ ನೋವು, ಅಜೀರ್ಣ, ಗ್ಯಾಸ್, ಅನಾರೋಗ್ಯಕರ ಆಹಾರ, ಜಡತ್ವ, ನೀರು ಕುಡಿಯದಿರುವುದು ಇತ್ಯಾದಿಗಳಿಂದಾಗಿ ಉಂಟಾಗುತ್ತದೆ. ಈ ಸಮಸ್ಯೆ ದೊಡ್ಡವರನ್ನಷ್ಟೇ ಅಲ್ಲದೇ ಚಿಕ್ಕ ಮಕ್ಕಳನ್ನು ಕೂಡ ಕಾಡುತ್ತಿದೆ. ಇನ್ನೂ ಈ ರೋಗದ ಮುಖ್ಯ ಲಕ್ಷಣಗಳೆಂದರೆ ಮಲ ವಿಸರ್ಜನೆಗೆ ತೊಂದರೆ ಉಂಟಾಗುವುದು. ಈ ಸಮಸ್ಯೆ ಇರುವವರಿಗೆ ವಾರದಲ್ಲಿ ಮೂರು ಬಾರಿ ಮಲವಿಸರ್ಜನೆ ಮಾಡಲು ಸಹ ಕಷ್ಟವಾಗುತ್ತದೆ.
ಜೊತೆಗೆ ಮಲವಿರ್ಸಜನೆ ಮಾಡುವಾಗ ಆಯಾಸವಾಗುವುದು, ನೋವಾಗುವುದು, ಗುದನಾಳದಲ್ಲಿ ಮಲ ಸಿಕ್ಕಿಕೊಂಡಂತೆ ಅನ್ನಿಸುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅಲ್ಲದೇ ಈಗ ಚಳಿಗಾಲ ಇಂತಹ ಸಮಯದಲ್ಲಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುವವರು ಹೆಚ್ಚು.
ಅನಿಯಂತ್ರಿತ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳು, ಔಷಧಿಗಳ ಅಡ್ಡ ಪರಿಣಾಮವಷ್ಟೇ ಅಲ್ಲದೇ ಕೆಲವು ಜೀವಸತ್ವಗಳ ಕೊರತೆ ಸಹ ಮಲಬದ್ಧತೆಗೆ ಕಾರಣವಾಗಿದೆ ಎಂದು ಪೌಷ್ಟಿಕತಜ್ಞ ಅವ್ನಿ ಕೌಲ್ ಹೇಳುತ್ತಾರೆ. ಅದರಲ್ಲೂ ವಿಟಮಿನ್ ಸಿ ಕಡಿಮೆ ಇರುವ ಆಹಾರಗಳ ಸೇವನೆಯು ಮಕ್ಕಳಲ್ಲಿ ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ.
ಹೀಗಾಗಿ ಮಕ್ಕಳು ಆರೋಗ್ಯಕರವಾಗಿರಲು ಫೋಲೇಟ್ ಮತ್ತು ಮೆಗ್ನೀಸಿಯಮ್ ಅನ್ನು ಸಹ ನೀಡಬೇಕು. ಅದರಲ್ಲೂ ಸಿಟ್ರಸ್ ಹಣ್ಣುಗಳು, ಹಸಿರು ಮೆಣಸಿನಕಾಯಿಗಳು, ಪುದೀನ ಎಲೆಗಳು ಮತ್ತು ಸೊಪ್ಪಿನ ಎಲೆಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಇವು ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯನ್ನು ದೂರಾಗಿಸಲು ಸಹಾಯ ಮಾಡುತ್ತದೆ.
ಆಹಾರದಲ್ಲಿ ವಿಟಮಿನ್ ಬಿ-12 ಕಡಿಮೆ ಇದ್ದರೂ ಮಲಬದ್ಧತೆ ಉಂಟಾಗಬಹುದು. ವಿಟಮಿನ್ B-12 ಮಾಂಸ, ಹಾಲು ಮತ್ತು ಮೊಟ್ಟೆ ಸೇರಿದಂತೆ ವಿವಿಧ ಪ್ರೋಟೀನ್ಗಳು ಮತ್ತು ಧಾನ್ಯಗಳಲ್ಲಿ ಕಂಡು ಬರುತ್ತದೆ. ವಿಟಮಿನ್ ಡಿ ಕೊರತೆಯು ದೀರ್ಘಕಾಲದ ಮಲಬದ್ಧತೆಗೆ ಕಾರಣವಾಗಬಹುದು.
ಹಾಗಾಗಿ ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟಲು ಈ ವಿಟಮಿನ್ ನಿಮ್ಮ ಆಹಾರದಲ್ಲಿ ಹೇರಳವಾಗಿರಬೇಕು. ಮಾಂಸ, ಎಣ್ಣೆಯುಕ್ತ ಮೀನು ಮತ್ತು ಹಾಲು ವಿಟಮಿನ್ ಡಿಯಲ್ಲಿ ಸಮೃದ್ಧವಾಗಿದೆ, ಆದರೆ, ನೀವು ಸೂರ್ಯನ ಬೆಳಕಿನಿಂದ ಈ ವಿಟಮಿನ್ ಅನ್ನು ಹೆಚ್ಚಾಗಿ ಪಡೆಯಬಹುದು. ಅಲ್ಲದೇ, ಆಹಾರದಲ್ಲಿ ಮೆಗ್ನೀಸಿಯಮ್ ಅಂಶ ಕೂಡ ಇರಬೇಕು
ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟಲು ಈ ಪದಾರ್ಥವನ್ನು ಸಹ ತಿನ್ನಬೇಕು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹಸಿರು ತರಕಾರಿಗಳು, ಡ್ರೈ ಫ್ರೂಟ್ಸ್ ಮತ್ತು ಬೀಜಗಳಂತಹ ಆಹಾರಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಮೆಗ್ನೀಸಿಯಮ್ ಅನ್ನು ಒದಗಿಸುತ್ತವೆ.
ಮಲಬದ್ಧತೆಗೆ ಕಾರಣವಾಗುವ ಈ ಆಹಾರಗಳನ್ನು ತಪ್ಪಿಸಿ: ಇತ್ತೀಚಿನ ದಿನಗಳಲ್ಲಿ ಸಂಸ್ಕರಿಸಿದ ಆಹಾರಗಳನ್ನು ತಿನ್ನುವ ಟ್ರೆಂಡ್ ಹೆಚ್ಚಾಗಿದೆ. ಆದರೆ ಇವುಗಳ ಸೇವನೆ ಹೊಟ್ಟೆಗೆ ಒಳ್ಳೆಯದಲ್ಲ. ಇದು ಹೆಚ್ಚು ಉಪ್ಪು, ಸಕ್ಕರೆ ಮತ್ತು ಸಂರಕ್ಷಕಗಳನ್ನು ಹೊಂದಿರುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತದೆ.
ಆಲ್ಕೋಹಾಲ್ ಸೇವನೆ: ಹೆಚ್ಚು ಆಲ್ಕೋಹಾಲ್ ಕರುಳಿನ ಒಳಪದರವನ್ನು ಹಾನಿಗೊಳಿಸುತ್ತದೆ. ಎಂಡೋಟಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆಸಿಡ್ ರಿಫ್ಲಕ್ಸ್, ಕಳಪೆ ಜೀರ್ಣಕ್ರಿಯೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಕರಿದ ಆಹಾರಗಳು: ಕರಿದ ಆಹಾರಗಳು ಅತಿಯಾದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಇದು ಹೊಟ್ಟೆ ಮತ್ತು ಕರುಳಿಗೆ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಏಕೆಂದರೆ ಅವುಗಳು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದು ಮಲಬದ್ಧತೆಗೆ ಕಾರಣವಾಗುತ್ತದೆ.