ಹದಿಹರೆಯದಲ್ಲಿ, ಯುವಕರಲ್ಲಿ ಹಾರ್ಮೋನ್ ಏರಿಳಿತಗಳಾದಾಗ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹುಡುಗಿಯರಲ್ಲಿ, ಈ ಸಮಸ್ಯೆ ಹೆಚ್ಚಾಗಿ ಋತುಚಕ್ರದ ಪ್ರಾರಂಭದ ನಂತರ ಕಂಡುಬರುತ್ತದೆ. ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ ಆಗುವುದರಿಂದ ಈ ಸಮಸ್ಯೆ ಸಾಮಾನ್ಯವಾಗಿದೆ. ಹುಡುಗರು ಮತ್ತು ಹುಡುಗಿಯರಿಗೆ 14 ವರ್ಷದ ನಂತರ ಹೆಚ್ಚು ಮೊಡವೆಗಳು ಕಂಡು ಬರಲು ಆರಂಭವಾಗುತ್ತದೆ. ಆದರೆ ನಿಮಗೆ ಗೊತ್ತಾ? ಕೆಲವರಲ್ಲಿ ಮೊಡವೆಗಳು ವರ್ಷಗಳ ವರೆಗೆ ಉಳಿಯಬಹುದು ಮತ್ತು ನಾನಾ ರೀತಿಯ ಅಸ್ವಸ್ಥತೆಗೆ ಕಾರಣವಾಗಬಹುದು.
ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಒಬ್ಬ ವ್ಯಕ್ತಿ ಅತಿಯಾದ ಮಾನಸಿಕ ಒತ್ತಡ ಅನುಭವಿಸಿದರೆ, ಅವರ ದೇಹದಲ್ಲಿನ ಕಾರ್ಟಿಸೋಲ್ ಹಾರ್ಮೋನಿನ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಇದು ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸುವ ಯುವಕರು ಸಹ ಸಾಕಷ್ಟು ಒತ್ತಡ ಅನುಭವಿಸುತ್ತಾರೆ ಎಂಬುದು ತಿಳಿದು ಬಂದಿದೆ. ಇದರಿಂದ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ” ಎಂದು ವೈದ್ಯರು ಹೇಳಿದ್ದಾರೆ.
ಆಹಾರದಲ್ಲಿ ಹೆಚ್ಚು ಡೈರಿ, ಜಂಕ್ ಫುಡ್ ಮತ್ತು ಅತಿಯಾದ ಸಿಹಿತಿಂಡಿಗಳನ್ನು ಸೇವಿಸಿದರೆ, ಅದು ಮುಖದ ಮೇಲೆ ಮೊಡವೆಗಳಿಗೆ ಕಾರಣವಾಗಬಹುದು. ಅನೇಕ ಸಂದರ್ಭಗಳಲ್ಲಿ, ನಿದ್ರೆಯ ಕೊರತೆ, ಹೆಚ್ಚುವರಿ ಧೂಮಪಾನವೂ ಕೂಡ ಮೊಡವೆಗಳಿಗೆ ಕಾರಣವಾಗುತ್ತದೆ. ಕೆಲವು ಬಾರಿ ಚರ್ಮದ ಆರೈಕೆ ಸರಿಯಾಗಿ ಮಾಡದಿದ್ದಾಗಲೂ ಕೂಡ ಮೊಡವೆಗಳು ಕಂಡು ಬರುತ್ತದೆ. ಉದಾಹರಣೆಗೆ, ನೀವು ಮುಖವನ್ನು ಸರಿಯಾಗಿ ತೊಳೆಯದಿದ್ದರೆ ಅಥವಾ ನಿಮ್ಮ ಚರ್ಮಕ್ಕೆ ವಿವಿಧ ರೀತಿಯ ಕ್ರೀಮ್ ಅಥವಾ ಜೆಲ್ ಗಳನ್ನು ಬಳಸುತ್ತಿದ್ದರೆ ಅದು ಮೊಡವೆಗಳಿಗೆ ಕಾರಣವಾಗಬಹುದು. ಜೊತೆಗೆ ಆಗಾಗ ಮುಖವನ್ನು ಮುಟ್ಟಿಕೊಳ್ಳುವುದು, ಮುಖ ತೊಳೆಯದಿರುವುದು ಕೂಡ ಮೊಡವೆಗಳಿಗೆ ಕಾರಣವಾಗಬಹುದು. ಅಲ್ಲದೆ ಆನುವಂಶಿಕ ಅಂಶಗಳು ಸಹ ಈ ಸಮಸ್ಯೆಗೆ ಕಾರಣವಾಗಬಹುದು” ಎಂದು ಹೇಳಿದ್ದಾರೆ.
ನಿಮ್ಮ ಮೊಡವೆಗಳ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಆದರೆ ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲಿ ಮೊದಲು ಮುಖದ ಶುಚಿತ್ವವನ್ನು ಕಾಪಾಡಿಕೊಳ್ಳುವುದು. ನಿಮ್ಮ ಮುಖವನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ತೊಳೆಯಿರಿ. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯುವುದು ಉತ್ತಮ. ಅದಲ್ಲದೆ ನಿಮಗೆ ಅಲರ್ಜಿ ಇರುವ ಆಹಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಸಿಹಿತಿಂಡಿಗಳು, ಮಸಾಲೆಯುಕ್ತ, ಹುರಿದ ಅಥವಾ ಬಿಸಿ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಮುಖದ ಮೇಲೆ ಮೊಡವೆಗಳು ಉಂಟಾದರೆ, ಅಂತಹ ವಸ್ತುಗಳನ್ನು ತಪ್ಪಿಸಿ. ಸಮತೋಲಿತ ಆಹಾರವನ್ನು ಸೇವಿಸಿ. ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ದಿನದಲ್ಲಿ ಕನಿಷ್ಠ 7 ಲೋಟ ನೀರು ಕುಡಿಯಿರಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಸಾಕಷ್ಟು ನಿದ್ರೆ ಮಾಡಿ. ಈ ವಿಧಾನಗಳನ್ನು ಪ್ರಯತ್ನಿಸಿದ ನಂತರವೂ, ಮೊಡವೆಗಳ ಸಮಸ್ಯೆ ದೂರವಾಗದಿದ್ದರೆ ನೀವು ವೈದ್ಯರಿಂದ ಸಲಹೆ ಪಡೆಯಿರಿ.