ಡಿಸೆಂಬರ್ ಕೊನೆಯ ದಿನ ಗಡಿಯಾರ 12 ಗಂಟೆ ಸೂಚಿಸುತ್ತಿದ್ದಂತೆ ವಿಶ್ವಾದ್ಯಂತ ಸಂಭ್ರಮ ಮನೆ ಮಾಡುತ್ತದೆ. ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡುತ್ತ ಪಟಾಕಿಗಳ ಸದ್ದು ಕೇಳಿ ಬರುತ್ತಿದೆ.
ಎಲ್ಲಾ ನಗರಗಳಲ್ಲೂ ಹಗಲಿನ ವಾತಾವರಣ ಮೂಡಿತ್ತು.ಯಾಕೆಂದರೆ ಇದು ಹೊಸ ವರ್ಷಾಚರಣೆಯ ಸಡಗರ. ಹೀಗೆ ಜಗತ್ತು 2023ಕ್ಕೆ ವಿದಾಯ ಹೇಳಿ ಉಜ್ವಲ ಭವಿಷ್ಯದ ಭರವಸೆಯೊಂದಿಗೆ 2024ರ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ.
ಜನವರಿ 1ರಂದೇ ವರ್ಷಾಚರಣೆ ಯಾಕೆ?
ಕ್ರಿ.ಪೂ. 45ರಲ್ಲಿ ಜನವರಿ 1 ಅನ್ನು ಮೊದಲ ಬಾರಿಗೆ ಹೊಸ ವರ್ಷದ ಪ್ರಾರಂಭವೆಂದು ಆಚರಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಅದಕ್ಕೂ ಮೊದಲು ರೋಮನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ಅನ್ನು ವರ್ಷಾರಂಭ ಎಂದು ಪರಿಗಣಿಸಲಾಗುತ್ತಿತ್ತು. ರೋಮನ್ ಕ್ಯಾಲೆಂಡರ್ ಪ್ರಕಾರ ವರ್ಷಕ್ಕೆ 355 ದಿನಗಳು. ರೋಮನ್ ಸರ್ವಾಧಿಕಾರಿ ಜ್ಯೂಲಿಯಸ್ ಸೀಸರ್ ಅಧಿಕಾರಕ್ಕೆ ಬಂದ ನಂತರ ಕ್ಯಾಲೆಂಡರ್ ಅನ್ನು ಬದಲಾಯಿಸಿ ಜನವರಿ 1 ಅನ್ನು ವರ್ಷದ ಮೊದಲ ದಿನವನ್ನಾಗಿಸಿದರು.
ರೋಮನ್ ದೇವತೆ ಜಾನುಸ್ನ ಗೌರವಾರ್ಥ ಮೊದಲ ತಿಂಗಳಿಗೆ ಜನವರಿ ಎಂದು ಹೆಸರಿಡಲಾಗಿತ್ತು ಎನ್ನುತ್ತದೆ ಇತಿಹಾಸ.
ಆಚರಣೆ ಹೇಗೆ?
ಅನೇಕ ದೇಶಗಳಲ್ಲಿ ಹೊಸ ವರ್ಷದ ಆಚರಣೆಗಳು ಡಿಸೆಂಬರ್ 31ರಂದೇ ಪ್ರಾರಂಭವಾಗುತ್ತವೆ. ಇದು ಹೊಸ ವರ್ಷದ ಮುನ್ನಾದಿನ ಎಂದು ಕರೆಯಲ್ಪಡುತ್ತದೆ. ಈ ಆಚರಣೆ ಜನವರಿ 1ರ ನಸುಕಿನ ತನಕ ಮುಂದುವರಿಯುತ್ತದೆ. ಈ ವೇಳೆ ಪಟಾಕಿ ಸಿಡಿಸುವುದು, ಪಾರ್ಟಿ ಮಾಡುವುದು ಸಾಮಾನ್ಯ. ಹೊಸ ವರ್ಷದ ಆರಂಭವು ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗುವ ಉತ್ತಮ ಸಮಯವೂ ಹೌದು. ಅದಕ್ಕಾಗಿಯೇ ಅನೇಕರು ಹೊಸ ವರ್ಷದ ಮೊದಲ ದಿನವೇ ಉತ್ತಮ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.