ಭಾರತದಲ್ಲಿ ಫೆಬ್ರವರಿ 13 ಅನ್ನು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಮಹಿಳಾ ದಿನವನ್ನು ಫೆಬ್ರವರಿ 13 ರಂದೇ ಆಚರಿಸಲು ಒಂದು ಕಾರಣವಿದೆ. ಅಂದು ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ ಸರೋಜಿನಿ ನಾಯ್ಡು ಅವರ ಜನ್ಮದಿನವೂ ಹೌದು. ಅವರು 1879 ಫೆಬ್ರವರಿ 13 ರಂದು ಜನಿಸಿ,
1949 ಮಾರ್ಚ್ 2 ರಂದು ನಿಧನರಾದರು. ಅವರು ಭಾರತದಲ್ಲಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ಮಹಿಳೆಯರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಮಹಿಳಾ ಸಂಘ ಮತ್ತು ಅಖಿಲ ಭಾರತೀಯ ಮಹಿಳಾ ಸಮ್ಮೇಳನ ಇಂಥದ್ದೊಂದು ದಿನವನ್ನು ಮೊದಲ ಬಾರಿಗೆ ಆಚರಿಸಿದವು.
ಸರೋಜಿನಿ ನಾಯ್ಡು ಅವರು ಫೆಬ್ರವರಿ 13, 1879 ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿ ಜನಿಸಿದರು. ಇವರ ತಂದೆ ಅಗೋರೆನಾಥ್ ಚಟ್ಟೋಪಾಧ್ಯರು. ಇವರು ಪ್ರಸಿದ್ಧ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದರು. ತಾಯಿ ಬಂಗಾಳಿ ಕವಿಯತ್ರಿ ಬರಾಡ ಸುಂದರಿ ದೇವಿ. ಸರೋಜಿನಿ ನಾಯ್ಡು ಅವರು ತಂದೆ ತಾಯಿಯರ ಎಂಟು ಮಕ್ಕಳಲ್ಲಿ ಮೊದಲೆನೆಯವರು.
ಸರೋಜಿನಿ ನಾಯ್ಡು ಅವರು ಚಿಕ್ಕಂದಿನಿಂದಲೇ ಬಹಳ ಚುರುಕಾಗಿದ್ದರು. ಶಾಲೆಯಲ್ಲಿ ಜಾಣ ವಿದ್ಯಾರ್ಥಿನಿಯಾಗಿದ್ದರು. ಇವರು ಮದ್ರಾಸ್ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷಯಲ್ಲಿ ಅಗ್ರಸ್ಥಾನ ಪಡೆದು ಮುಂದೆ 16ನೇ ವಯಸ್ಸಿನಲ್ಲಿ ಲಂಡನ್ನ ಕಿಂಗ್ಸ್ ಕಾಲೇಜ್ ಮತ್ತು ಕೇಂಬ್ರಿಜ್ನ ಗಿರ್ಟನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಇಂಗ್ಲೆಂಡಿಗೆ ತೆರಳಿದರು.
ಸರೋಜಿನಿ ನಾಯ್ಡು ಅವರು ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಇವರ ತಂದೆ ಇವರು ಗಣಿತ ತಜ್ಞೆ ಅಥವಾ ವಿಜ್ಞಾನಿಯಾಗಲಿ ಎಂದು ಬಯಸಿದ್ದರು. ಆದರೆ ಸರೋಜಿನಿ ನಾಯ್ಡು ಅವರು ಕವಿಯಿತ್ರಿಯಾಗಲು ಇಷ್ಟಪಟ್ಟಿದ್ದರು.
ಇವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಪೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ನೀಡಿದರು.
ಸರೋಜಿನಿ ನಾಯ್ಡು ಅವರು ತಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿ ತಮ್ಮ 19ನೇ ವಯಸ್ಸಿನಲ್ಲಿ ಗೋವಿಂದರಾಜು ನಾಯ್ಡು ಅವರನ್ನು ಅಂತರ್ಜಾತಿಯ ಮದುವೆಗಳು ನಡೆಯಲು ಅವಕಾಶವಿಲ್ಲದ ಕಾಲದಲ್ಲಿ ಇವರು ಅಂತರ್ಜಾತಿ ವಿವಾಹವಾದರು.
1929 ರಲ್ಲಿ ಸರೋಜಿನಿ ನಾಯ್ಡು ಅವರು ದಕ್ಷಿಣ ಆಫ್ರಿಕಾದ ಪೂರ್ವ ಆಫ್ರಿಕನ್ ಇಂಡಿಯನ್ ಕಾಂಗ್ರೆಸ್ನ ಅಧ್ಯಕ್ಷತೆ ವಹಿಸಿ ಭಾರತದಲ್ಲಿ ಹರಡಿದ್ದ ಪ್ಲೇಗ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಅವರು ಮಾಡಿದ ಕಾರ್ಯಕ್ಕೆ ಬ್ರಿಟಿಷ್ ಸರ್ಕಾರದ ಕೈಸರ್ ಐ ಹಿಂದ್ ಪದಕವನ್ನು ನೀಡಿ ಗೌರವಿಸಿತ್ತು.
ಇವರು ಅನೇಕ ಕೃತಿ, ಕವನ, ಕಾವ್ಯಗಳನ್ನು ಬರೆದಿದ್ದಾರೆ. ಸಾಂಗ್ಸ್ ಆಫ್ ಲವ್, ಡೆತ್ ಅಂಡ್ ದಿ ಸ್ಟ್ರಿಂಗ್, ದಿ ಗೋಲ್ಡನ್ ತ್ರೆಷೋಲ್ಡ್, ದಿ ಬರ್ಡ್ ಆಫ್ ಟೈಮ್, ದಿ ಬ್ರೋಕನ್ ವಿಂಗ್, ದಿ ಪಾಧರ್ ಆಫ್ ಡಾನ್ ಮುಂತಾದವುಗಳು. ಇದಕ್ಕಾಗಿಯೇ ಇವರನ್ನ ‘ಇಂಡಿಯನ್ ನೈಟಿಂಗೇಲ್’ ಎಂಬ ಬಿರುದಿನಿಂದ ಕರೆಯಲಾಗುತ್ತಿತ್ತು.
ಭಾರತದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸರೋಜಿನಿ ನಾಯ್ಡು ಸೇವೆ ಸಲ್ಲಿಸಿದ್ದರು. ಇಂದು ಭಾರತದಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಸರೋಜಿನಿ ಅವರು ಭಾರತದಲ್ಲಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಪ್ರತಿ ವರ್ಷ ಭಾರತದಲ್ಲಿ ಫೆಬ್ರವರಿ 13 ರಂದು ರಾಷ್ಟ್ರೀಯ ಮಹಿಳಾ ದಿನ ಆಚರಣೆ ಮಾಡಲಾಗುತ್ತದೆ. ಸರೋಜಿನಿ ನಾಯ್ಡು ಅವರು ಉತ್ತರ ಪ್ರದೇಶದ ಲಕ್ನೋದಲ್ಲಿ ಮಾರ್ಚ್ 2,1949 ರಂದು ಹೃದಯಾಘಾತದಿಂದ ನಿಧನರಾದರು.