ಬೆಂಗಳೂರು: ತಿ ವರ್ಷ ನವೆಂಬರ್ 11 ರಂದು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶೈಕ್ಷಣಿಕ ದಾರ್ಶನಿಕರಾದ ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರನ್ನು ಭಾರತೀಯರೆಲ್ಲರೂ ನೆನೆಯುವ ದಿನ. ಅವರ ಜನ್ಮದಿನ ಸಹ ಹೌದು. ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರು.
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಮೌಲಾನಾ ಅಜಾದ್ ರವರು 1947 ರ ಆಗಸ್ಟ್ 15 ರಿಂದ 1958 ರ ಫೆಬ್ರುವರಿ 2 ರವರೆಗೆ ಸೇವೆ ಸಲ್ಲಿಸಿದ್ದರು. ‘ಭಾರತರತ್ನ’ ಪ್ರಶಸ್ತಿ ಪುರಸ್ಕೃತರಾದ ಮೌಲಾನಾ ಅಜಾದ್ ರವರ ಜನ್ಮದಿನವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ದೇಶದಾದ್ಯಂತ ಶಾಲೆ-ಕಾಲೇಜುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಈ ದಿನದಂದು ನೆನಪಿಸಿಕೊಳ್ಳಲಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ:
ಮೌಲಾನಾ ಅಬುಲ್ ಕಲಾಂ ಆಜಾದ್ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿ, ಭಾರತೀಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಮಹತ್ತರವಾದ ಕೊಡುಗೆಯನ್ನು ಗೌರವಿಸುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2008 ರಲ್ಲಿ ಆಜಾದ್ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.
ಮೌಲಾನ ಅಬುಲ್ ಕಲಾಂ ಆಜಾದ್ ಯಾರು?
ಭಾರತವು ಇಂದು ದೃಢವಾದ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ, ಆ ವ್ಯವಸ್ಥೆಗೆ ಅಡಿಪಾಯವನ್ನು ಹಾಕಿದ ಕೀರ್ತಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಗೆ ಸಲ್ಲುತ್ತದೆ. ಸಮಾಜವನ್ನು ಪರಿವರ್ತಿಸಲು ಮತ್ತು ಜನಸಾಮಾನ್ಯರನ್ನು ಸಬಲಗೊಳಿಸು ಪ್ರಬಲವಾದ ಅಸ್ತ್ರ ಶಿಕ್ಷಣ ಎಂದು ದೃಢವಾಗಿ ನಂಬಿದ್ದ ಆಜಾದ್, ಭಾರತದ ಮೊದಲ ಶಿಕ್ಷಣ ಸಚಿವರಾಗಿ ದೇಶದ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕಿದರು.
ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನವೆಂಬರ್ 11, 1888 ರಲ್ಲಿ ಜನಿಸಿದರು. ಆಜಾದ್ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಪತ್ರಕರ್ತ ಮತ್ತು ಬರಹಗಾರರಾಗಿದ್ದರು. ಆಜಾದ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡ ನಂತರ, ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ನೇಮಕಗೊಂಡರು ಮತ್ತು ಇವರು ತಮ್ಮ ಅಧಿಕಾರವಧಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ಮತ್ತು ಎಲ್ಲರಿಗೂ ಶಿಕ್ಷಣವನ್ನು ದೊರೆಯುವಂತೆ ಮಾಡುವಲ್ಲಿ ಗಮನಾರ್ಹವಾಗಿ ಕೊಡುಗೆಯನ್ನು ನೀಡಿದ್ದಾರೆ.
ಮೌಲಾನ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣವನ್ನು ಭಾರತದ ಅಭಿವೃದ್ಧಿಯ ಆಧಾರವೆಂದು ಪರಿಗಣಿಸಿದ್ದರು ಮತ್ತು ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮತ್ತು ಉಚಿತ ಮಾಡಲು ಪ್ರಸ್ತಾಪಿಸಿದರು. ಇದಲ್ಲದೆ ಅವರು ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್ (ICSSR), ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸ್ಥಾಪನೆ ಮಾಡಿದರು.
ಹೀಗೆ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR), ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ICCR), ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಚರ್ ಮತ್ತು ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ಸ್(UGC) ಅನ್ನು ಸ್ಥಾಪಿಸಲಾಯಿತು. ಹೀಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ, ಆಧುನೀಕರಿಸುವಲ್ಲಿ ಆಜಾದ್ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ:
ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಮತ್ತು ಮುಖ್ಯವಾಗಿ ಈ ದಿನ ರಾಷ್ಟ್ರ ನಿರ್ಮಾಣದಲ್ಲಿ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಮೌಲಾನಾ ಅಬುಲ್ ಕಲಾಂ ಆಜಾದ್ ಅವರನ್ನು ಸ್ಮರಿಸಲಾಗುತ್ತದೆ. ಶಿಕ್ಷಣವು ನಮ್ಮ ಜೀವನವನ್ನು ಸುಧಾರಿಸುವ ಪ್ರಬಲ ಸಾಧನವಾಗಿದೆ. ಇದು ನಮಗೆ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ನೀಡುತ್ತದೆ. ಶಿಕ್ಷಣದ ಮೂಲಕ ನಮ್ಮ ಗುರಿಯನ್ನು ಸಾಧಿಸಬಹುದು ಹೀಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ಶಿಕ್ಷಣ ಪಾತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ.