ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ಧಿಕಿಯನ್ನು ಹತ್ಯೆಯ ಹೊಣೆಯನ್ನು ಹೊತ್ತ ಬಳಿಕ ನಟ ಸಲ್ಮಾನ್ ಖಾನ್ಗೆ ಭದ್ರತೆ ಹೆಚ್ಚಾಗಿದೆ. ಸಲ್ಮಾನ್ ಖಾನ್ ಜೊತೆಗಿನ ಹಳೇಯ ವೈಷಮ್ಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಹೌದು ಸದ್ಯ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವುದು ಲಾರೆನ್ಸ್ ಬಿಷ್ಣೋಯ್ ಎನ್ನುವ ಖತರ್ನಾಕ್ ಯುವಕನ ಹೆಸರು.
ಭದ್ರತಾ ದೃಷ್ಟಿಯಿಂದ ಈತನನ್ನು ಮೂರು ಬಾರಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಭರತಪುರ್ ಜೈಲು, ತಿಹಾರ್ ಜೈಲಿನ ನಂತರ ಈಗ ಬಿಷ್ಣೋಯ್ ಅನ್ನು ಸಬರಮತಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅತ್ಯಾಧುನಿಕ VoIP ಟೆಕ್ನಾಲಜಿ ಮೂಲಕ, ತಮ್ಮ ಸಹಚರರನ್ನು ಸಂಪರ್ಕಿಸುವ ಈತ ಬಾಲ್ಯದಿಂದಲೇ ಕ್ರಿಮಿನಲ್ ಏನೂ ಅಲ್ಲ.
ಮುಂಬೈನ ಬಾಂದ್ರಾದಲ್ಲಿ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿಯನ್ನು ಗುಂಡೇಟಿನಿಂದ ಹತ್ಯೆಗೈಯ್ಯಲಾಗಿತ್ತು. ಈ ಸಂಬಂಧ, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕಿ ಕೊಲೆಯ ಹೊಣೆಯನ್ನು ಇದೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಹಿಸಿಕೊಂಡಿದೆ. ನಟ ಸಲ್ಮಾನ್ ಖಾನ್ ಜೊತೆ ಈತ ಆಪ್ತನಾಗಿರುವುದೇ ಬಿಷ್ಣೋಯ್ ಸಿಟ್ಟಿಗೆ ಕಾರಣವಾಗಿ, ಸಿದ್ದಿಕಿಯನ್ನು ಕೊಲ್ಲಲಾಗಿದೆ ಎಂದು ಹೇಳಲಾಗುತ್ತದೆ.
ಕಾನೂನು ನಿನ್ನನ್ನು ಬಿಟ್ಟರೂ, ನಾನು ನಿನ್ನನ್ನು ಬಿಡಲಾರೆ
ಕಾನೂನು ನಿನ್ನನ್ನು ಬಿಟ್ಟರೂ, ನಾನು ನಿನ್ನನ್ನು ಸುಮ್ಮನೆ ಬಿಡಲಾರೆ ಎಂದು ಬಿಷ್ಣೋಯ್, ಸಲ್ಮಾನ್ ಖಾನ್ ಗೆ ಎಚ್ಚರಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಕೆಲವು ದಿನಗಳ ಹಿಂದೆ, ಸಲ್ಮಾನ್ ಖಾನ್ ಮನೆಯ ಮುಂದೆ ಗುಂಡಿನ ಶಬ್ದ ಸದ್ದು ಮಾಡಿತ್ತು. ಇದು ಕೂಡಾ, ಸಲ್ಮಾನ್ ಖಾನ್ ಕೊಲ್ಲಲು ಬಿಷ್ಣೋಯ್ ಗ್ಯಾಂಗ್ ನಡೆಸಿದ್ದ ಕೃತ್ಯ ಎಂದೇ ಉಲ್ಲೇಖವಾಗಿತ್ತು.
ಸಲ್ಮಾನ್ ಖಾನ್ ಹಿಂದೆ ಈ ನಟೋರಿಯಸ್ ಬಿದ್ದಿರುವುದು ಇಂದು ನಿನ್ನೆಯಲ್ಲ. ಸುಮಾರು 26 ವರ್ಷದ ಹಿಂದೆ, ಸಲ್ಮಾನ್ ಖಾನ್ ಮತ್ತು ತಂಡ ರಾಜಸ್ಥಾನದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿತ್ತು. ಆ ವೇಳೆ, ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಬೇಟೆಯಾಡಿ ಕೊಂದಿದ್ದರು. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಕೃಷ್ಣಮೃಗ ಕೂಡಾ ಇದೆ.
ಬಿಷ್ಣೋಯ್ ತಂಡಕ್ಕೆ ಸಲ್ಮಾನ್ ಖಾನ್ ಮೇಲೆ ಭಾರೀ ಸಿಟ್ಟು
ಈ ಘಟನೆಯೇ ಬಿಷ್ಣೋಯ್ ತಂಡಕ್ಕೆ ಸಲ್ಮಾನ್ ಖಾನ್ ಮೇಲೆ ಸಿಟ್ಟಿಗೆ ಕಾರಣ. ಬುಡಕಟ್ಟು ಸಮುದಾಯಕ್ಕೆ ಸೇರಿರುವ ಲಾರೆನ್ಸ್ ಬಿಷ್ಣೋಯ್ ಕುಟುಂಬ, ಕೃಷ್ಣಮೃಗವನ್ನು ದೇವರೆಂದು ಪೂಜಿಸುತ್ತದೆ. ನನ್ನ ದೇವರನ್ನು ಕೊಂದ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬಿಷ್ಣೋಯ್ ಬೆದರಿಕೆ ಹಾಕಿದ್ದ. ಇದಾದ ನಂತರ, ಸಲ್ಮಾನ್ ಖಾನಿಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಈಗ, ಸಲ್ಮಾನ್ ಖಾನ್ ಮತ್ತು ಸಿದ್ದಿಕಿ ಆಪ್ತರಾಗಿರುವುದರಿಂದ, ಸಿದ್ದಿಕಿಯನ್ನು ಸಾಯಿಸುವ ಮೂಲಕ, ಮುಂದೆ ನಿಮ್ಮ ಸರದಿ ಎನ್ನುವ ಎಚ್ಚರಿಕೆಯನ್ನು ಈ ಗ್ಯಾಂಗ್ ನೀಡಿದೆ ಎಂದು ಹೇಳಲಾಗುತ್ತಿದೆ.
2012ರಿಂದ ಜೈಲಿನಲ್ಲೇ ಇರುವ ಬಿಷ್ಣೋಯ್
2012ರಿಂದ ಜೈಲಿನಲ್ಲೇ ಇರುವ ಬಿಷ್ಣೋಯ್, ಸುಮಾರು 700 ಜನರ ಬಲಾಢ್ಯ ತಂಡವನ್ನು ಕಟ್ಟಿಕೊಂಡಿದ್ದಾನೆ. ತನ್ನ ತಂಡದ ಸದಸ್ಯರ ಪೈಕಿ ಒಬ್ಬರಿಗೆ ಏನಾದರೂ ಆದರೂ, ಹಗೆ ಸಾಧಿಸುವುದು ಈತನ ಕ್ರಿಮಿನಲ್ ಹಿನ್ನಲೆ. ಪ್ರತೀಕಾರದ ಮೂರ್ತಿಯಂತಿರುವ ಈತನ ತಂಡದ ಹೆಸರು ಪಂಜಾಬೀ ಗಾಯಕ ಸಿಧು ಮೂಸೆವಾಲ, ಕೆನಡಾದ ಗ್ಯಾಂಗ್ಸ್ಟರ್ ಸುಖದೂಲ್ ಸಿಂಗ್ ಅಲಿಯಾಸ ಸುಖ ದುನೆಕೆ ಮೊದಲಾದವರ ಹತ್ಯೆಯಲ್ಲೂ ತುಳುಕು ಹಾಕುತ್ತಿತ್ತು.
ಖಲಿಸ್ಥಾನಿ ಉಗ್ರರ ಜೊತೆಗೂ ನಂಟು
ಈತ ಖಲಿಸ್ಥಾನಿ ಉಗ್ರರ ಜೊತೆಗೂ ನಂಟು ಬೆಳೆಸಿಕೊಂಡಿದ್ದ ಎಂದು ಎನ್ಐಎ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು. ಬರೀ ರೌಡಿಸಂಗೆ ಸೀಮಿತವಲ್ಲದೇ, ಮದ್ಯ ಸಾಗಾಣಿಕೆ, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಸೇರಿದಂತೆ ಆದಾಯವಿರುವ ಎಲ್ಲಾ ದಂಧೆಯಲ್ಲಿ ಇವನ ಪಾತ್ರವಿದೆ ಎಂದೂ ಉಲ್ಲೇಖವಾಗಿದೆ.
ಫಿರೋಜಪುರದಲ್ಲಿ ಜನಿಸಿದ ಬಿಷ್ಣೋಯ್
ಫೆಬ್ರವರಿ 1993ರಲ್ಲಿ ಪಂಜಾಬ್ ರಾಜ್ಯದ ಫಿರೋಜಪುರದಲ್ಲಿ ಜನಿಸಿದ ಬಿಷ್ಣೋಯ್ ತಂದೆ ಮೊದಲು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ನಂತರ ವೃತ್ತಿಪರ ಕೃಷಿಕರಾಗಿ ಕೆಲಸ ನಿರ್ವಹಿಸಿದವರು. ಅಬುಹರ್ ಎನ್ನುವ ಪ್ರದೇಶದಲ್ಲಿ ತನ್ನ ಪಿಯುಸಿಯನ್ನು ಮುಗಿಸಿದ ನಂತರ ಚಂಡೀಗಡದ ಡಿಎವಿ ಕಾಲೇಜಿಗೆ ಸೇರ್ಪಡೆಗೊಳ್ಳುತ್ತಾನೆ.
ಮುಗ್ದನಂತಿದ್ದ ಈತನಿಗೆ ಗೋಲ್ಡಿ ಬ್ರಾರ್ ಎನ್ನುವ ವ್ಯಕ್ತಿಯ ಪರಿಚಯವಾಗುತ್ತದೆ. ಅಲ್ಲಿಯ ವರೆಗೂ ಮುಗ್ದನಂತಿದ್ದ ಈತನಿಗೆ ಗೋಲ್ಡಿ ಬ್ರಾರ್ ಎನ್ನುವ ವ್ಯಕ್ತಿಯ ಪರಿಚಯವಾಗುತ್ತದೆ. ಗ್ಯಾಂಗ್ ಸ್ಟರ್ ಆಗಿದ್ದ ಬ್ರಾರ್ ಜೊತೆಗಿನ ಸಹವಾಸ ದೋಷದಿಂದಾಗಿ, ಲಾರೆನ್ಸ್ ಬಿಷ್ಣೋಯ್ ಅಪರಾಧ ಲೋಕಕ್ಕೆ ಕಾಲಿಡುತ್ತಾನೆ. 2013ರಲ್ಲಿ ಕಾಲೇಜು ಯೂನಿಯನ್ ಚುನಾವಣೆಯ ಗೆದ್ದ ಅಭ್ಯರ್ಥಿಯನ್ನೇ ಗುಂಡಿಟ್ಟು ಕೊಂದಿದ್ದ. ಲೂಧಿಯಾನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ತನ್ನ ವಿರುದ್ದದ ಅಭ್ಯರ್ಥಿಯನ್ನು ಸಾಯಿಸಿದ್ದ.
11 ರಾಜ್ಯಗಳು ಮತ್ತು 6 ದೇಶಗಳಲ್ಲಿ ಅಪರಾಧ ಸಾಮ್ರಾಜ್ಯ!
ಎನ್ಐಎ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ಒಂದು ಕಾಲದಲ್ಲಿ ಪಂಜಾಬ್ಗೆ ಮಾತ್ರ ಸೀಮಿತವಾಗಿತ್ತು. ಆದರೆ ತನ್ನ ಕುತಂತ್ರದ ಬುದ್ದಿ ಮತ್ತು ತನ್ನ ನಿಕಟವರ್ತಿ ಗೋಲ್ಡಿ ಬ್ರಾರ್ನಿಂದ ಹರಿಯಾಣ, ದೆಹಲಿ ಮತ್ತು ರಾಜಸ್ಥಾನದ ಗ್ಯಾಂಗ್ಗಳೊಂದಿಗೆ ಮೈತ್ರಿ ಮಾಡಿಕೊಂಡು ದೊಡ್ಡ ಗ್ಯಾಂಗ್ ಅನ್ನು ರಚಿಸಿದನು. ಬಿಷ್ಣೋಯ್ ಗ್ಯಾಂಗ್ ಈಗ ಉತ್ತರ ಭಾರತ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ ಮತ್ತು ಜಾರ್ಖಂಡ್ನಲ್ಲಿ ವ್ಯಾಪಿಸಿದೆ. ಸಾಮಾಜಿಕ ಮಾಧ್ಯಮ ಮತ್ತು ಇತರ ಹಲವು ವಿಧಾನಗಳ ಮೂಲಕ ಯುವಕರನ್ನು ಗ್ಯಾಂಗ್ಗಳಿಗೆ ಸೇರಿಸಲಾಗುತ್ತದೆ. ಈ ಗ್ಯಾಂಗ್ ಯುಎಸ್ಎ, ಅಜರ್ಬೈಜಾನ್, ಪೋರ್ಚುಗಲ್, ಯುಎಇ ಮತ್ತು ರಷ್ಯಾಕ್ಕೆ ಹರಡಿದೆ.