ಬೆಂಗಳೂರು: ಬ್ರೇನ್ ಡೆತ್ ಅಥವಾ ಮೆದುಳು ಸಾವು ಎಂದರೆ ವ್ಯಕ್ತಿ ಪೂರ್ತಿ ಸತ್ತಿದ್ದಾನೆ ಎಂದು ಅರ್ಥ. ಮೆದುಳು ಸಾವು ಎಂಬುದನ್ನ ವೈದ್ಯರು ದೃಢೀಕರಿಸಬೇಕು. ಕೆಲವೊಮ್ಮೆ ಸಹಜವಾಗಿ ಓಡಾಡುತ್ತಿರುವ ವ್ಯಕ್ತಿ ಬ್ರೇನ್ ಡೆತ್ಗೆ ಒಳಗಾಗುವುದುಂಟು. ಕೆಲವೊಮ್ಮೆ ಅಪಘಾತಕ್ಕೆ ತುತ್ತಾಗಿ ಜೀವರಕ್ಷಕ ವ್ಯವಸ್ಥೆಯಲ್ಲಿರುವ ವ್ಯಕ್ತಿ ಬ್ರೇನ್ ಡೆತ್ಗೆ ಒಳಗಾಗುತ್ತಾನೆ/ಳೆ. ಮೆದುಳು ತನ್ನ ಕಾರ್ಯವನ್ನು ಪೂರ್ತಿಯಾಗಿ ನಿಲ್ಲಿಸಲು ನಾನಾ ಕಾರಣಗಳಿರಬಹುದು.
ಬ್ರೇನ್ ಡೆತ್ಗೆ ಒಳಗಾದಾಗ ಇತರ ಅಂಗಗಳೂ ತಮ್ಮ ಕೆಲಸ ನಿಲ್ಲಿಸುತ್ತವೆ. ಯಾಕೆಂದರೆ ಮೆದುಳಿನಿಂದ ಅವುಗಳಿಗೆ ಯಾವುದೇ ಸಂದೇಶ ಬರುವುದಿಲ್ಲವಾದ್ದರಿಂದ. ಉಳಿದಂತೆ ಅವು ಸುಸ್ಥಿತಿಯಲ್ಲಿರುತ್ತವೆ. ವ್ಯಕ್ತಿಯ ಬೇರೆ ಯಾವುದೇ ಅಂಗ ಕೆಲಸ ನಿಲ್ಲಿಸಿದರೆ ಅದನ್ನು ದುರಸ್ತಿ ಮಾಡಬಹುದು, ಕಸಿ ಮಾಡಬಹುದು ಅಥವಾ ಬೇರೆ ಅಂಗವನ್ನು ಜೋಡಿಸಬಹುದು. ಆದರೆ ಮೆದುಳು ನಿಷ್ಕ್ರಿಯವಾದರೆ, ಏನೂ ಮಾಡಲು ಸಾಧ್ಯವಿಲ್ಲ.
ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? ನಿರ್ವಹಣೆ ಮತ್ತು ಆರೈಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.!
ಮೆದುಳು ಕೆಲಕಾಲ ಕೆಲಸ ಮಾಡುವಂತೆ ಆಮ್ಲಜನಕ ಪೂರೈಸಬಹುದು, ಜೀವರಕ್ಷಕ ವ್ಯವಸ್ಥೆಯಲ್ಲಿ ದೇಹವನ್ನು ಇಡಬಹುದು. ಆದರೆ ವ್ಯಕ್ತಿಯ ಪ್ರಜ್ಞೆ ಮರಳುವುದಿಲ್ಲ. ಜೀವರಕ್ಷಕ ವ್ಯವಸ್ಥೆಯು ಹೃದಯ ರಕ್ತ ಪಂಪ್ ಮಾಡುವಂತೆ ಮಾಡುತ್ತದೆ, ಶ್ವಾಸಕೋಶ ಉಸಿರಾಡುವಂತೆ ಮಾಡುತ್ತದೆ; ಆದರೆ ಮೆದುಳು ಕಾರ್ಯಾಚರಿಸುವಂತೆ ಮಾಡುವ ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂಧ ಮೆದುಳು ಸತ್ತಿತೆಂಧರೆ ವ್ಯಕ್ತಿ ಸತ್ತನೆಂದೇ ಅರ್ಥ. ಬ್ರೇನ್ ಡೆತ್ ಎಂಬುದು ಒಬ್ಬ ವ್ಯಕ್ತಿಯ ಸಾವಿನ ಕಾನೂನಿನ ಪ್ರಕಾರದ ವ್ಯಾಖ್ಯೆ.
ದಾನ ಮಾಡುವುದು ಹೇಗೆ?
ಸಾಮಾನ್ಯವಾಗಿ ಮೆದುಳು ಕೆಲಸ ನಿಲ್ಲಿಸಿದಾಗ, ಆಸ್ಪತ್ರೆಯಲ್ಲಿರುವ ವ್ಯಕ್ತಿಯನ್ನು ವೆಂಟಿಲೇಟರ್ನಲ್ಲಿ ಇಡಲಾಗುತ್ತದೆ. ಮೆದುಳು ಪೂರ್ತಿಯಾಗಿ ಕೆಲಸ ನಿಲ್ಲಿಸಿದ್ದರೂ, ವೆಂಟಿಲೇಟರ್ ಸಹಾಯದಿಂದ ೨-೩ ದಿನಗಳ ಕಾಲ ಹೃದಯ ಹೊಡೆದುಕೊಳ್ಳುವಂತೆ ನೋಡಿಕೊಳ್ಳಬಹುದು. ಇದು ಅಂಗದಾನದ ಬಗ್ಗೆ ಕುಟುಂಬಸ್ಥರಿಗೆ ನಿರ್ಧರಿಸಲು, ದೇಹದಿಂದ ಅಂಗವನ್ನು ತೆಗೆದು ಸಂರಕ್ಷಿಸುವ ಕೆಲಸ ಮಾಡಲು ವೈದ್ಯರಿಗೆ ಸಾಕಷ್ಟು ಸಮಯ ನೀಡುತ್ತದೆ. ಸಾಮಾನ್ಯವಾಗಿ ಮೆದುಳು ಸಾವಿಗೀಡಾದ ವ್ಯಕ್ತಿಯ ಮನೆಯವರನ್ನು, ಅಗದಾನ ಮಾಡುವಂತೆ ವೈದ್ಯರು ಮನವೊಲಿಸುತ್ತಾರೆ.
ಯಾಕೆಂದರೆ ಅಂಗಕಸಿಯ ಅಗತ್ಯವಿರುವವರು ನಮ್ಮ ದೇಶದಲ್ಲಿ ಅತೀ ಹೆಚ್ಚು. ಆದರೆ ಅಂಗದಾನ ಮಾಡುವವರು ಅತೀ ಕಡಿಮೆ ಸಂಖ್ಯೆ ಮಂದಿ. ಭಾರತದಲ್ಲಿ 2 ಲಕ್ಷ ಜನರಿಗೆ ಕಿಡ್ನಿಯ ಅವಶ್ಯಕತೆಯಿದೆ. ದಾನಕ್ಕೆ ಮುಂದೆ ಬಂದವರ ಸಂಖ್ಯೆ 8 ಸಾವಿರ. ಯಕೃತ್ತಿನ ಜರೂರತ್ತಿರುವವರು 80 ಸಾವಿರ. 1800 ಜನ ದಾನಿಗಳು ಒಪ್ಪಿಕೊಂಡಿದ್ದಾರೆ. ವರ್ಷಕ್ಕೆ 2 ಲಕ್ಷ ಕಣ್ಣಿನ ಕಾರ್ನಿಯಾ ಅವಶ್ಯಕತೆಯಿದೆ. ದಾನ ದೊರೆತಿರುವುದು 50,000 ಮಾತ್ರ. ವರ್ಷಕ್ಕೆ 15,000 ಹೃದಯ ಬೇಕು. ದೊರೆಯುವುದು 250 ಮಾತ್ರ. ಅಂಗಗಳು ಸುಸ್ಥಿತಿಯಲ್ಲಿದ್ದು ಸತ್ತವರ ಮನವೊಲಿಸಿ ವೈದ್ಯರು ಅಂಗದಾನ ಮಾಡಿಸಿಕೊಳ್ಳುತ್ತಾರೆ. ಕೆಲವು ಕುಟುಂಬಗಳು ಇದಕ್ಕೂ ಒಪ್ಪುವುದಿಲ್ಲ.
ಏಳು ಜೀವ ಉಳಿಸಬಹುದು!
ಬ್ರೇನ್ ಡೆಡ್ ಆದ ಒಬ್ಬ ವ್ಯಕ್ತಿ ದೇಹದಾನ ಮಾಡಿದರೆ ಏಳು ಜೀವಗಳನ್ನು ಉಳಿಸಬಲ್ಲ- ಹೃದಯ, ಶ್ವಾಸಕೋಶ, ಎರಡು ಕಿಡ್ನಿಗಳು, ಪಿತ್ಥಕೋಶ, ಪಿತ್ತಜನಕಾಂಗ, ಕರುಳು ನೀಡುವ ಮೂಲಕ. ಇದಲ್ಲದೆ ಕಾರ್ನಿಯಾ, ಇತರ ಅಂಗಾಂಶಗಳನ್ನೂ ನೀಡಬಹುದು. ಒಂದುವೇಳೆ ಹೃದಯಸ್ತಂಭನದಿಂದ ವ್ಯಕ್ತಿ ಸತ್ತಿದ್ದರೆ ಹೃದಯ ಕಸಿ ಮಾಡಲು ಬರುವುದಿಲ್ಲ. ಮಧುಮೇಹ ಇತ್ಯಾದಿಗಳಿಂದ ಸತ್ತಿದ್ದರೆ ಲಿವರ್, ಕಿಡ್ನಿ, ಇತ್ಯಾದಿ ನೀಡಲು ಸಾಧ್ಯವಿಲ್ಲ. ಆದರೆ ಕೇವಲ ಬ್ರೇನ್ ಡೆತ್ನಿಂದ ಸತ್ತವರ ಹೆಚ್ಚಿನ ಅಂಗಗಳ ಸದ್ಬಳಕೆ ಸಾಧ್ಯವಿದೆ. ಆದ್ದರಿಂದಲೇ ಮೆದುಳು ಸಾವಿಗೀಡಾದವರ ಅಂಗದಾನಕ್ಕೆ ಆದ್ಯತೆ.
ಸ್ವಯಂಪ್ರೇರಿತವಾಗಿ ನೀವು ಅಂಗದಾನ ಮಾಡಬಹುದು
ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಇರುವ National Organ and Tissue Transplant Organization NOTTO ಅಂಗದಾನಕ್ಕೆ ಪ್ರೇರೇಪಣೆ ನೀಡುತ್ತಿದೆ. ಇದರ ವೆಬ್ಸೈಟ್ www.notto.gov.inದಲ್ಲಿ ಅಂಗದಾನದ ಕುರಿತು ಎಲ್ಲ ವಿವರಗಳೂ ಲಭ್ಯವಿವೆ. ಈ ಜಾಲತಾಣದಲ್ಲಿರುವ ಅರ್ಜಿಯನ್ನು ತುಂಬಿ ಅಂಗದಾನಕ್ಕೆ ನಮ್ಮ ಸಮ್ಮತಿಯನ್ನೂ ನೀಡಬಹುದು. ಇಂತದೇ ಇನ್ನೊಂದು ಸರಕಾರಿ ಸಂಸ್ಥೆ Regional Organ and Tissue Transplant Organization ROTTO.