ಮೊನ್ನೆಯಷ್ಟೇ ತಮ್ಮ ಹೊಸ ಚಿತ್ರಕ್ಕೆ ಟಾಕ್ಸಿಕ್ ಎಂದು ಹೆಸರಿಟ್ಟು ಸಾಕಷ್ಟು ಕುತೂಹಲ ಮೂಡಿಸಿರುವ ಯಶ್, ತಮ್ಮ ಹೊಸ ಸಿನಿಮಾದ ಶೂಟಿಂಗ್ (Shooting) ಅನ್ನು ಜನವರಿಯಿಂದ ಶುರು ಮಾಡಲಿದ್ದಾರಂತೆ. ಚಿತ್ರೀಕರಣಕ್ಕೆ ಆಗಲೇ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು, ಜನವರಿ (January) ಎರಡನೇ ವಾರದಿಂದ ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎನ್ನುತ್ತಿವೆ ಮೂಲಗಳು.
ಯಶ್ (Yash) ಈ ಬಾರಿ ಪ್ಯಾನ್ ಇಂಡಿಯಾವನ್ನೂ ದಾಟಿಕೊಂಡು ಯೋಚನೆ ಮಾಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಆಯ್ಕೆ ಮಾಡಿಕೊಂಡಿರುವ ಕಥೆ ನೋಡಿದರೆ, ಇದೊಂದು ಹಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ ಕನ್ನಡದ ಸಿನಿಮಾ ಎಂದೇ ಹೇಳಬಹುದು. ಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಂದರೂ, ಅದಕ್ಕೆ ತೊಂದರೆ ಆಗದಿರುವಂತೆ ‘ಟಾಕ್ಸಿಕ್’ (Toxic) ಎಂದು ಹೆಸರಿಟ್ಟಿದ್ದಾರೆ. ಇದು ಎಲ್ಲ ಭಾಷೆಗೂ ಸಲ್ಲುವಂತೆ ಟೈಟಲ್ ಆಗಿದೆ.
ಇದರ ಜೊತೆಗೆ ಮತ್ತೊಂದು ವಿಷಯವೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಇಂದು ರಿಲೀಸ್ ಆಗಿರುವ ಟೈಟಲ್ ಟೀಸರ್ ನಲ್ಲಿ ಅದರ ಛಾಯೆ ಕೂಡ ಇದೆ. ಟಾಕ್ಸಿಕ್ ಸಿನಿಮಾದಲ್ಲಿ ಇಂಟರ್ ನ್ಯಾಷನಲ್ ಡ್ರಗ್ಸ್ ಮಾಫಿಯಾ ಕುರಿತಾದ ಕಥೆಯನ್ನು ಹೇಳಲಿದ್ದಾರಂತೆ ನಿರ್ದೇಶಕ ಗೀತು ಮೋಹನದಾಸ್ (Geethu Mohan Das). ಟೈಟಲ್ ಟೀಸರ್ ನಲ್ಲಿ ಒಂದು ಕಡೆ ಯಶ್ ಕೈಯಲ್ಲಿ ಗನ್, ಬಾಯಲ್ಲಿ ಸಿಗಾರೆ ಮತ್ತು ಅವನ ಸುತ್ತಮುತ್ತ ಪೌಡರ್ ಹಾರುತ್ತಿದೆ. ಹಾಗಾಗಿ ಇದೊಂದು ಡ್ರಗ್ಸ್ ಮಾಫಿಯಾದ ಕಥೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರದ ಮೂಲಕ ಯಶ್ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ (KVN Production) ಜೊತೆ ಮಾನ್ ಸ್ಟರ್ ಮೈಂಡ್ ಕ್ರಿಯೇಸನ್ಸ್ ಹೆಸರು ಕೂಡ ಇದ್ದು, ಈ ಸಂಸ್ಥೆಯು ಯಶ್ ಅವರದ್ದು ಎಂದು ಹೇಳಲಾಗುತ್ತಿದೆ. 2019 ರಲ್ಲಿ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಯಶ್ ನೋಂದಣಿ ಮಾಡಿದ್ದಾರೆ. ಇದೀಗ ತಮ್ಮ 19ನೇ ಸಿನಿಮಾ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನ ನಿರ್ಮಾಣ ಮಾಡಲು ಯಶ್ ನಿರ್ಧಾರ ಮಾಡಿದ್ದಾರೆ.