ಬೆಂಗಳೂರು:- ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಕರಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗಿರುತ್ತದೆ. ಒಬ್ಬರಿಗೆ ಒಳ್ಳೆಯ ಅನುಭವವಾದರೆ, ಇನ್ನೂ ಕೆಲವರಿಗೆ ಕೆಟ್ಟ ಅನುಭವವಾಗಿರುತ್ತದೆ. ಅದೇ ರೀತಿ ಬೆಂಗಳೂರಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ವಾಯು ವಜ್ರ ಬಸ್ನಲ್ಲಿ ತಮಗಾದ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಎಂಟಿಸಿ ತನಗಾಗಿ ಹೇಗೆ ಸೇವೆ ನೀಡಿತು ಎಂದು ಬರೆದು ಬಸ್ ಚಾಲಕ ಮತ್ತು ಕಂಡಕ್ಟರ್ಗೆ ಧನ್ಯವಾದ ತಿಳಿಸಿದ್ದಾರೆ.
ಹರಿಹರನ್ ಎನ್ನುವ ವ್ಯಕ್ತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.” ನಾನು ಏರ್ಪೋರ್ಟ್ನಿಂದ ಹಿಂದಿರುಗುವಾಗ, ಬಸ್ನಲ್ಲಿ ನಾನೊಬ್ಬನೇ ಇದ್ದರೂ ಸಹ ಇವರಿಬ್ಬರು ಜಂಟಲ್ಮೆನ್ಗಳು ಸಮಯಕ್ಕೆ ಸರಿಯಾಗಿ ಬಸ್ ಚಲಾಯಿಸಿದರು. ಜೊತೆಗೆ ಈ ಪ್ರಯಾಣದಲ್ಲಿ ನನಗೆ ಒಳ್ಳೆಯ ಕಂಪನಿ ನೀಡಿದರು. ಹಾಗೂ ಸುರಕ್ಷಿತವಾಗಿ ನನ್ನನ್ನು ಕರೆತಂದರು” ಎಂದು ಬಿಎಂಟಿಸಿ ವಜ್ರ ಬಸ್ನ ಚಾಲಕ ಹಾಗೂ ನಿರ್ವಾಹಕರ ಫೋಟೋ ಹಂಚಿಕೊಂಡಿದ್ದಾರೆ.
ಈ ಸಂಚಾರ ದಟ್ಟಣೆಯಲ್ಲಿ ತುಂಬಿರುವ ಬೆಂಗಳೂರು ನಗರದಲ್ಲಿ ಈ ಬಸ್ನಲ್ಲಿ ನಾನೊಬ್ಬನೆ ಪ್ರಯಾಣಿಕನಾಗಿದ್ದು ಅಚ್ಚರಿ ಎನಿಸಿತು. ಆದರೆ ಚಾಲಕ ಹಾಗೂ ನಿರ್ವಾಹಕ ಒಬ್ಬನೇ ಪ್ರಯಾಣಿಕನನ್ನು ಪರಿಗಣಿಸಿ ಬೇರೆ ಕಾರಣಗಳನ್ನು ನೀಡಿ ಕಾಯದೇ ಸಮಯ ಪ್ರಜ್ಞೆಯಿಂದ ಬಸ್ ಚಲಾಯಿಸಿರುವುದಕ್ಕೆ ಹರಿಹರನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹರಿಹರನ್ ಅವರ ಪೋಸ್ಟ್ಗೆ ನೆಟ್ಟಿಗರು ಪ್ರತಿಕ್ತಿಯಿಸಿದ್ದು, ವ್ಯಕ್ತಿಯೊಬ್ಬರು ‘ಈ ಬಸ್ನ ನಿರ್ವಹಣಾ ವೆಚ್ಚ ಪ್ರತಿ ಕಿಲೋ ಮೀಟರ್ಗೆ 95 ರೂಪಾಯಿ’ ಎಂದು ಬರೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಹರಿಹರನ್’ ಈ ವಿಚಾರ ನನಗೆ ಇದುವರೆಗೂ ಗೊತ್ತಿರಲಿಲ್ಲ. ಹಾಗಿದ್ದರೆ ಅಂದಿನ ದಿನಕ್ಕೆ ನಾನು ಅದೃಷ್ಟಶಾಲಿಯಾಗಿದ್ದೆ’ ಎಂದಿದ್ದಾರೆ.