ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಎಲ್ಪಿಜಿ ಸಿಲಿಂಡರ್ ಹೊಂದುವುದು ಅನಿವಾರ್ಯವಾಗಿದೆ. ಆದರೆ ಕೆಲವೊಮ್ಮೆ ಗ್ಯಾಸ್ ಲೀಕ್ ಆದ ವಾಸನೆ ಬರುತ್ತದೆ. ಗ್ಯಾಸ್ ಸಿಲಿಂಡರ್ ಸ್ಫೋಟವಾಗಬಹುದು ಎಂದು ಭಯಭೀತರಾಗುತ್ತೇವೆ. ಈ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯುವುದಿಲ್ಲ. ದುರಂತದಿಂದ ತಪ್ಪಿಸಿಕೊಳ್ಳಲು ಮತ್ತು ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ..
- ಗ್ಯಾಸ್ ಲೀಕ್ ಆದ ವಾಸನೆ ಬರುತ್ತಿದೆಯೆಂದಾದರೆ ಗಾಬರಿ ಆಗಬೇಡಿ. ಭಯಭೀತರಾದರೆ ತಕ್ಷಣಕ್ಕೆ ಯಾವುದೇ ಉಪಾಯಗಳು ಹೊಳೆಯುವುದಿಲ್ಲ. ಆತಂಕ ಪಡದಂತೆ ನಿಮ್ಮ ಮನೆಯ ಇತರ ಸದಸ್ಯರಿಗೂ ತಿಳಿಸಿ.
- ನಿಮ್ಮ ಮನೆಯಲ್ಲಿ ಯಾವುದೇ ಬೆಂಕಿ, ಅದು ಎಷ್ಟೇ ಚಿಕ್ಕದಾಗಿದ್ದರೂ ಅದನ್ನು ನಂದಿಸಿ. ಅದು ದೇವರ ದೀಪ ಆಗಿದ್ದರೂ ನಂದಿದಿ. ಅಗರಬತ್ತಿ ಕಡ್ಡಿಗಳನ್ನು ಸಹ ನಂದಿಸಿ. ಯಾವುದೇ ಕಾರಣಕ್ಕೂ ಬೆಂಕಿ ಕಡ್ಡಿ ಸಹಿತ ಕೊರೆಯಬೇಡಿ.
- ಗ್ಯಾಸ್ ರೆಗ್ಯುಲೇಟರ್ ಆಫ್ ಮಾಡಿ. ನಂತರ ಸಿಲಿಂಡರ್ಗೆ ಸೇಫ್ಟಿ ಕ್ಯಾಪ್ ಹಾಕಿ.
- ನಿಮ್ಮ ಮನೆಯ ಎಲ್ಲಾ ಬಾಗಿಲುಗಳು ಮತ್ತು ಕಿಟಕಿಗಳನ್ನು ತಕ್ಷಣವೇ ತೆರೆಯಿರಿ ಇದರಿಂದ ಅನಿಲವು ಹೊರಬರುತ್ತದೆ. ಗ್ಯಾಸ್ ಬೇಗ ಹೊರಹೋಗಲಿ ಎಂದು ಯಾವುದೇ ಎಲೆಕ್ಟ್ರಿಕ್ ಫ್ಯಾನ್ ಅಥವಾ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡಬೇಡಿ. ಅನಿಲವು ನೈಸರ್ಗಿಕವಾಗಿ ಹೊರಹೋಗಲಿ.
- ಗ್ಯಾಸ್ ಹೊರಹೋಗಲು ಅನುವು ಮಾಡಿಕೊಟ್ಟು ನೀವು ಮನೆಯಿಂದ ಹೊರಗೆ ಹೋಗಿ ಮುಖ್ಯ ವಿದ್ಯುತ್ ಸರಬರಾಜನ್ನು (ಮೇನ್ಸ್) ಪ್ರತ್ಯೇಕಿಸಿ. ನಿಮ್ಮನ್ನು ಮತ್ತು ಇತರರನ್ನು ಪ್ರದೇಶದಿಂದ ಸ್ಥಳಾಂತರಿಸಲು ಮರೆಯದಿರಿ.
- ಹೆಚ್ಚಿನ ಪ್ರಮಾಣದ ಗ್ಯಾಸ್ ಅನ್ನು ಉಸಿರಾಡಿದ್ದರೆ ಅಂತವರನ್ನು ತಾಜಾ ಗಾಳಿ ಬೀಸುವ ಪ್ರದೇಶಕ್ಕೆ ತಕ್ಷಣವೇ ಕಳುಹಿಸಿ. ಆರಾಮದಾಯಕವಾಗಿ ವಿಶ್ರಾಂತಿ ಪಡೆಯಲು ಬಿಡಿ.
- ಅನಿಲವು ನಿಮ್ಮ ಬಟ್ಟೆ ಮತ್ತು ಚರ್ಮದೊಂದಿಗೆ ಸಂಪರ್ಕವನ್ನು ಹೊಂದಿದ್ದರೆ, ತಕ್ಷಣವೇ ಕಲುಷಿತ ಬಟ್ಟೆಗಳನ್ನು ತೆಗೆದುಹಾಕಿ ಮತ್ತು ನಿಮ್ಮ ದೇಹವನ್ನು ಚೆನ್ನಾಗಿ ನೀರಿನಿಂದ ತೊಳೆಯಿರಿ. ಅಗತ್ಯವಿದ್ದರೆ ವೈದ್ಯಕೀಯ ಸಹಾಯವನ್ನು ಪಡೆಯಿರಿ.
- ಅನಿಲವು ಕಣ್ಣುಗಳಿಗೆ ಪ್ರವೇಶಿಸಿದರೆ, ಅದು ತುರಿಕೆ ಮತ್ತು ಉರಿಗೆ ಕಾರಣವಾಗುತ್ತದೆ. ಆಗ ಸುಮಾರು 15-20 ನಿಮಿಷಗಳ ಕಾಲ ಸಾಕಷ್ಟು ನೀರಿನಿಂದ ಕಣ್ಣುರೆಪ್ಪೆ ಮತ್ತು ಕಣ್ಣನ್ನು ತೊಳೆಯಿರಿ. ಕಣ್ಣನ್ನು ನೀರಿನೊಳಗೆ ಅದ್ದುತ್ತಾ ಇರಿ.
- ಸೇಫ್ಟಿ ಲ್ಯಾಪ್ ಹಾಕಿದ ಬಳಿಕವೂ ಸಿಲಿಂಡರ್ಗೆ ಬೆಂಕಿ ತಗುಲಿದ್ದರೆ ಚಿಂತಿಸಬೇಡಿ. ಒದ್ದೆಯಾದ ಟವೆಲ್ ಅಥವಾ ಒದ್ದೆಯಾದ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಸಿಲಿಂಡರ್ ಸುತ್ತಲೂ ಕಟ್ಟಿ. ಇದರಿಂದ ಜ್ವಾಲೆಗೆ ಗಾಳಿಯ ಪೂರೈಕೆ ಸ್ಥಗಿತಗೊಳ್ಳುತ್ತದೆ ಮತ್ತು ಬೆಂಕಿ ಕಡಿಮೆಯಾಗುತ್ತದೆ.
- ಈ ವೇಳೆ ಯಾವಕಾರಣಕ್ಕೂ ಸಿಲಿಂಡರ್ ಅನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸರಿಸಬೇಡಿ. ಇದು ಸಮಸ್ಯೆಗಳನ್ನು ಉಂಟುಮಾಡಬಹುದು.
- ಒಮ್ಮೆ ನೀವು ಮೇಲಿನ ಎಲ್ಲಾ ಹಂತಗಳನ್ನು ನಿರ್ವಹಿಸಿದ ನಂತರ, ಸಹಾಯವಾಣಿ ಸಂಖ್ಯೆ18002333555 ಗೆ ಕರೆ ಮಾಡಿ ಮತ್ತು ಸೋರಿಕೆಯ ಬಗ್ಗೆ ಅವರಿಗೆ ತಿಳಿಸಿ. ಅವರು ಬಂದು ನಿಮಗೆ ಸಹಾಯ ಮಾಡಬಹುದು.