ಜನವರಿ 22 ರಂದು ‘ಪ್ರಾಣ ಪ್ರತಿಷ್ಠೆ’ ಸಮಾರಂಭ ನಡೆಯಲಿದೆ. ಅದಕ್ಕೆ ಕೆಲವು ದಿನಗಳ ಮೊದಲು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗಿದೆ. ಬಾಲರಾಮನ ಸಂಪೂರ್ಣ ವಿಗ್ರಹವನ್ನು ತೋರಿಸುವ ಫೋಟೋ ಹಂಚಿಕೊಳ್ಳಲಾಗಿದ್ದು, ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಾಲರಾಮನ ವಿಗ್ರಹದ ವಿಶೇಷತೆ?: 51 ಇಂಚು ಎತ್ತರವಿರುವ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿಯು ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದೆ. ಬಾಲರಾಮನ ಹಣೆಯ ಮೇಲೆ ತಿಲಕವಿದೆ. ಬಾಲರಾಮನ ಮೂರ್ತಿಯ ಮೇಲ್ಬಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಮಾಡಲಾಗಿದೆ. ಬಾಲ ರಾಮನ ಮೂರ್ತಿ ಚಂದ್ರನ ನಾಚಿಸುವಷ್ಟು ಕಾಂತಿ ಅದ್ಭುತ ಕಳೆಯಲ್ಲಿದೆ.
ಬಾಲರಾಮನ ಕಿರೀಟದ ಮೇಲೆ ನರಸಿಂಹ ದೇವರ ಕೆತ್ತನೆ ಇದೆ. ದಶವತಾರ ಬಿಂಬಿಸುವ ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ಬ್ರಹ್ಮ, ಓಂ, ಆದಿಶೇಷ, ಚಕ್ರ ಹಾಗೂ ಈಶ್ವರ ಬಲಭಾಗದಲ್ಲಿದ್ದಾನೆ. ಇನ್ನು ಬಾಲರಾಮನ ಎಡಗಡೆ ಹಾಗೂ ಮೇಲ್ಗಡೆ ಶಂಕ, ಗಧೆ, ಸ್ವಸ್ತಿಕ್, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕ್ಲಕಿ, ಹಾಗೂ ನೆತ್ತಿನ ಮೇಲೆ ಸೂರ್ಯನಿದ್ದಾನೆ.
ಬಿಳಿ ಬಟ್ಟೆಯಿಂದ ವಿಗ್ರಹವನ್ನು ಮುಚ್ಚಲಾಗಿತ್ತು: ಇದಕ್ಕೂ ಮುನ್ನ ರಾಮಲಲ್ಲಾ ವಿಗ್ರಹದ ಚಿತ್ರಗಳು ಹೊರಬಿದ್ದಿದ್ದವು. ಅದರಲ್ಲಿ ವಿಗ್ರಹವನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಗುರುವಾರ ಮುಂಜಾನೆ ದೇವಸ್ಥಾನಕ್ಕೆ ತರಲಾಯಿತು. ಅರ್ಚಕ ಅರುಣ್ ದೀಕ್ಷಿತ್ ಅವರು ರಾಮಲಲ್ಲಾ ವಿಗ್ರಹವನ್ನು ಗುರುವಾರ ಮಧ್ಯಾಹ್ನ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಜನವರಿ 22 ರಂದು ಬಾಲರಾಮನ ಪ್ರಣ ಪ್ರತಿಷ್ಠೆ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉಡುಪಿ ಪೇಜಾವರ ಮಠದ ಟ್ರಸ್ಟಿ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ. ಭದ್ರತೆಯ ಕಾರಣದಿಂದ ಈ ದಿನದಂದು ಆಹ್ವಾನಿತ ಅತಿಥಿಗಳಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು. ಜನವರಿ 22 ರಂದು ರಾಮ ಮಂದಿರದಲ್ಲಿ ‘ಪ್ರಾಣ ಪ್ರ ತಿಷ್ಠಾ’ ಸಮಾರಂಭದ ನಂತರ, ದೇವಾಲಯವನ್ನು ಮರುದಿನ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ.