ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜ್ಯಾಧ್ಯಕ್ಷ ಸ್ಥಾನ ಕೊನೆಗೂ ಘೋಷಣೆಯಾಗಿದೆ, ಅಳೆದೂ ತೂಗಿ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರರನ್ನ ಸಾರಥಿಯನ್ನಾಗಿ ಮಾಡಿದೆ ಬಿಜೆಪಿ ಹೈಕಮಾಂಡ್. ವಿಜಯೇಂದ್ರಗೆ ಅಭಿನಂದನೆಗಳ ಮಹಾಪೂರವೇ ಹರಿದುಬರ್ತಿದ್ದು, ಯುವ ಪಡೆಗೆ ಹೊಸ ಚೈತನ್ಯ ಮೂಡಿದಂತಾಗಿದೆ, ಕಾರ್ಯಕರ್ತನೇ ಪಕ್ಷದ ಬಲ ಅನ್ನೋ ಸಂದೇಶ ಸಾರಿದ್ದಾರೆ. ಇನ್ಮುಂದೆ ರಾಜ್ಯ ಬಿಜೆಪಿಯಲ್ಲಿ ಜ್ಯೂನಿಯರ್ ರಾಜಾಹುಲಿಯ ಖದರ್ ಶುರುವಾಗಲಿದೆ….
ವಿಧಾನಸಭಾ ಚುನಾವಣೆಯ ನಂತರ ರಾಜ್ಯ ಬಿಜೆಪಿ ಒಡೆದು ಮೂರು ಬಾಗಿಲಾಗಿತ್ತು, ಮಾಜಿ ಸಿಎಂ ಯಡಿಯೂರಪ್ಪ, ಬಿಎಲ್ ಸಂತೋಷ್, ಯತ್ನಾಳ್ ಬಣಗಳ ನಡುವೆ ಕೋಲ್ಡ್ ವಾರ್ ನಿಂದಾಗಿ ಬಿಜೆಪಿ ಸೂತ್ರವಿಲ್ಲದ ಗಾಳಿಪಟವಾಗಿತ್ತು. ಅದ್ರಲ್ಲೂ ಪ್ರಮುಖವಾಗಿ ಮುಂದಿನ ರಾಜ್ಯಾಧ್ಯಕ್ಷ ಯಾರು ಅನ್ನೋ ಚರ್ಚೆಗಳು ಜೋರಾಗಿದ್ವು ಯಡಿಯೂರಪ್ಪ- ಸಂತೋಷ್ ಬಣದ ನಡುವೆ ಅಧ್ಯಕ್ಷ ಪಟ್ಟಕ್ಕೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಜೋರಾಗೆ ಇತ್ತು. ಸಿಟಿ ರವಿ, ಅಶ್ವಥ್ ನಾರಾಯಣ, ಶೋಭಾ ಕರಂದ್ಲಾಜೆ, ಯತ್ನಾಳ್, ಸೋಮಣ್ಣ ಸೇರಿದಂತೆ ಹಲವು ನಾಯಕರು ರೇಸ್ ನಲ್ಲಿದ್ರು. ಎಲ್ಲಾ ಘಟಾನುಗಟಿಗಳ ಮಧ್ಯೆ ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ರಾಜ್ಯ ಕೇಸರಿ ಸಾರಥಿಯ ಪಟ್ಟ ಕಟ್ಟಲಾಗಿದೆ….
.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತಕ್ಷಣದಿಂದ ಜಾರಿಗೆ ಬರುವಂತೆ ವಿಜಯೇಂದ್ರ ರನ್ನ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ವಿಜಯೇಂದ್ರ ಹೆಸರು ಘೋಷಣೆಯಾಗ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು ಸಾಲು – ಸಾಲು ಬಿಜೆಪಿ ನಾಯಕರು, ಪಕ್ಷದ ಕಾರ್ಯಕರ್ತರು ಯಡಿಯೂರಪ್ಪ ನವರ ಧವಳಗಿರಿ ನಿವಾಸಕ್ಕೆ ಬಂದು ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಶುಭಕೋರಿದ್ರು. ಮಾಜಿ ಸಿಎಂ ಬೊಮ್ಮಾಯಿ, ಸಿಟಿ ರವಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ದಿಗ್ಗಜರು ಟ್ವೀಟ್ ಮಾಡಿ ಶುಭಕೋರಿದ್ರು. ಯಡಿಯೂರಪ್ಪ ಸಹ ತಮ್ಮ ಪುತ್ರ ವಿಜಯೇಂದ್ರಗೆ ಸಿಹಿ ತಿನ್ನಿಸಿ ಆಶೀರ್ವಾದ ಮಾಡಿ ಮುಂದಿನ ಪಯಣಕ್ಕೆ ಶುಭಕೋರಿ ಹರಸಿದ್ರು….
ಇನ್ನು ತಮಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗ್ತಿದ್ದಂತೆ ಫುಲ್ ಆಕ್ಟೀವ್ ಆಗ ಬಿವೈ ವಿಜಯೇಂದ್ರ ಪಕ್ಷದ ಕಾರ್ಯಕರ್ತನಿಗೇ ಮೊದಲ ಆದ್ಯತೆ ಅನ್ನೋ ಸಂದೇಶ ಸಾರಿದ್ರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 40ರ ಬಿಜೆಪಿ ಕಾರ್ಯಕರ್ತ ಶಶಿಧರ್ ಎಂಬುವರ ಮನೆಗೆ ತೆರಳಿ ಶಶಿಂಧರ್ ಕುಟುಂಬದವರಿಗೆ ಸಿಹಿ ತಿನ್ನಿಸಿದ ಸಂತಸ ಹಂಚಿಕೊಂಡ್ರು. ಇದಾದ್ಮೇಲೆ ಚಾಮರಾಜಪೇಟೆಯ RSS ಕಛೇರಿಗೆ ತೆರಳಿ ಸಂಘದ ಪ್ರಮುಖರ ಜೊತೆ 30ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ಮಾಡಿದ್ರು. ಈ ವೇಳೆ ಮಾತನಾಡಿದ ವಿಜಯೇಂದ್ರ ಬೂತ್ ಗೆದ್ದರೆ ದೇಶ ಗೆಲ್ತೇವೆ ಅನ್ನೋದು ಅಮಿತ್ ಶಾ, ಜೆ ಪಿ ನಡ್ಡಾ ವಿಶ್ವಾಸ ಈ ನಿಟ್ಟಿನಲ್ಲಿ ಮೊದಲ ದಿನ ಬೂತ್ ಅಧ್ಯಕ್ಷರ ಮನೆಗೆ ಬಂದಿದ್ದೆನೆ, ಸಂತೋಷ ತಂದಿದೆ. ಘಟಾನುಘಟಿ ನಾಯಕರೂ ಬೂತ್ ಅಧ್ಯಕ್ಷರಾಗಿ ಬಂದವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಿಗುವ ಗೌರವ ಬೂತ್ ಅಧ್ಯಕ್ಷರಿಗೂ ಸಿಕ್ತಿದೆ ನಮ್ಮ ಪಕ್ಷದಲ್ಲಿ ಅಂತ ಸಂತಸ ವ್ಯಕ್ತಪಡಿಸಿದ್ರು..
ಇನ್ನು ತಮ್ಮ ಪುತ್ರನಿಗೆ ಅಧ್ಯಕ್ಷ ಸ್ಥಾನ ಸಿಗ್ತಿದ್ದಂತೆ ಸಂತೋಷಗೊಂಡ ಮಾಜಿ ಸಿಎಂ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ರು.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗುತ್ತೆ ಅಂತ ನಾವ್ಯಾರು ನಿರೀಕ್ಷೆ ಇಟ್ಟಿರಲಿಲ್ಲ, ದೆಹಲಿಗೆ ಹೋಗಿ ರಾಜ್ಯಾಧ್ಯಕ್ಷ ಹುದ್ದೆ ಕೊಡಿ ಅಂತಾನೂ ಕೇಳಿರಲಿಲ್ಲ. ನಾವು
25 ಲೋಕಸಭಾ ಕ್ಷೇತ್ರ ಗೆಲ್ಲಬೇಕು ಅಂತ ಗುರಿ ಹೊಂದಿದ್ದೇವೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ವಿಜಯೇಂದ್ರ ಮಾಡ್ತಾರೆ. ಪಕ್ಷವನ್ನು ಸಧೃಡವಾಗಿ ಕಟ್ಟಿಬೆಳೆಸ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು…..
ಒಟ್ನಲ್ಲಿ ಕಳೆದ 4-5 ತಿಂಗಳಿನಿಂದ ಕುತೂಹಲ ಕೆರಳಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊನೆಗು ಘೋಷಣೆಯಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಕೇಸರಿ ಪಡೆಯ ಸಾರಥಿಯಾಗಿದ್ದಾರೆ. ಕಳೆಗುಂದಿರುವ ಪಕ್ಷದ ವರ್ಚಸ್ಸು,ಬಣ ರಾಜಕೀಯ, ಪಕ್ಷ ಸಂಘಟನೆಯ ಜೊತೆ ಲೋಕಸಮರವನ್ನು ಗೆಲ್ಲುವ ದೊಡ್ಡ ಜವಾಬ್ದಾರಿ ಇದೆ. ಇವೆಲ್ಲಾ ಸವಾಲುಗಳನ್ನು ಮರಿ ರಾಜಾಹುಲಿ ಹೇಗೆ ನಿಬಾಯಿಸ್ತಾರೆ ಎಂಬುದನ್ನು ಕಾದುನೋಡಬೇಕಿದೆ..….