ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಗೂ ನೀರು ಅತ್ಯಗತ್ಯ. ಈಜಿಪ್ಟಿನಿಂದ ಸಿಂಧೂ ನಾಗರಿಕತೆವರೆಗೆ ಬಹುತೇಕ ಎಲ್ಲಾ ನಾಗರಿಕತೆಗಳು ಹುಟ್ಟಿದ್ದು ನದಿ ಪಾತ್ರದಲ್ಲೇ. ನದಿಗಳು ಮಾನವನ ಜೀವನಕ್ಕೆ ಅಗತ್ಯವಾದ ಸಿಹಿ ನೀರನ್ನು ಒದಗಿಸುವ ಜಲಮೂಲವಾಗಿದೆ. ಆದರೆ ಇಂದು ಕೈಗಾರೀಕರಣ, ನಗರೀಕರಣದಂತಹ ಅಭಿವೃದ್ಧಿಯ ಕಾರಣದಿಂದ ಅನೇಕ ನದಿಗಳು ಕಲುಷಿತಗೊಂಡಿವೆ. ನದಿಯ ಸಮೀಪದಲ್ಲಿ ಅನೇಕ ವೈವಿಧ್ಯಮಯ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ನೆಲೆಯೂರುತ್ತವೆ. ವಾರಾಂತ್ಯದ ಸಮಯದಲ್ಲಿ ನದಿಗಳಿರುವ ತಾಣಗಳಿಗೆ ಭೇಟಿ ನೀಡಿ ಕಾಲ ಕಳೆಯಲು ಬಹುತೇಕರು ಬಯಸುತ್ತಾರೆ.
ಕೆಲವು ಅದ್ಭುತವಾದ ಮತ್ತು ಆಹ್ಲಾದಕರವಾದ ನದಿಗಳು ಒತ್ತಡವನ್ನು ದೂರವಾಗಿಸಿ, ಮನಸ್ಸಿಗೆ ಮುದವನ್ನು ಉಂಟು ಮಾಡುತ್ತದೆ. ಆದರೆ ವಿಶ್ವದ ಕೆಲವು ನದಿಗಳು ಪ್ರಾಣಕ್ಕೆ ಆಪತ್ತನ್ನು ತಂದೊಡ್ಡಬಹುದು. ನಮ್ಮ ವಿಶ್ವದಲ್ಲಿರುವ ಈ ನದಿಗಳು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಆ ನದಿಗಳು ಯಾವುವು ಎಂಬುದನ್ನು ಇಲ್ಲಿದೆ.
ಕಾಂಗೊ ನದಿ
ಈ ಕಾಂಗೊ ನದಿಯು ಆಫ್ರಿಕಾ ದೇಶದಲ್ಲಿದ್ದು, ಅತ್ಯಂತ ಅಪಾಯಕಾರಿ ನದಿ ಎಂದು ಕರೆಯಲಾಗುತ್ತದೆ. ಅಲ್ಲದೆ, ಇದು ಆಫ್ರಿಕಾದ ಅತ್ಯಂತ ಉದ್ದನೆಯ ನದಿಗಳಲ್ಲಿ ಎರಡನೇಯದಾಗಿದೆ. ಪ್ರತಿ ಸೆಕೆಂಡಿಗೆ 14,76,376 ಘನ ಅಡಿಗಳಷ್ಟು ನೀರನ್ನು ಸಾಗಿಸುವ ಕಾಂಗೊ ನದಿಯು ಅಮೆಜಾನ್ ನದಿಯ ನಂತರ ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದ ಜಲರಾಶಿಗಳನ್ನು ಹೊಂದಿದೆ. ಈ ಕಾಂಗೊ ನದಿಯು ವಿಶ್ವದ ಅತ್ಯಂತ ಆಳವಾದ ನದಿಯಾಗಿದ್ದು, ಸುಮಾರು 720 ಅಡಿ ಆಳವನ್ನು ಹೊಂದಿದೆ ಎನ್ನಲಾಗುತ್ತದೆ. ನದಿಯ ಮೇಲಿನ ಭಾಗವು ಕೂಡ ಅಷ್ಟೇ ಅಪಾಯಕಾರಿಯಾಗಿದೆ.
ಶನಯ್ ಟಿಂಪಿಷ್ಕಾ
ಪೆರುವಿನಲ್ಲಿರುವ ಈ ಶನಯ್ ಟಿಂಪಿಶ್ಕಾ ನದಿಯನ್ನು ‘ಲಾ ಬೊಂಬಾ’ ಎಂದೂ ಕೂಡ ಕರೆಯಲಾಗುತ್ತದೆ. ಇದು ಅಮೆಜಾನ್ ನದಿಯ ಉಪನದಿಯಾಗಿದ್ದು, ವಿಶ್ವದ ಏಕೈಕ ಕುದಿಯುವ ನದಿ ಎಂದು ಕರೆಯಲಾಗುತ್ತದೆ. ಇದು 6.4 ಕಿ.ಮೀ ಉದ್ದವಿದ್ದು, ನೀರಿನ ಅತ್ಯಂತ ಹೆಚ್ಚಿನ ತಾಪಮಾನಕ್ಕೆ ಹೆಸರುವಾಸಿಯಾಗಿದೆ.
ಈ ಆಶ್ಚರ್ಯಕರವಾದ ನದಿಯು ಹುವಾನುಕೊ ಎತ್ತರದ ಅರಣ್ಯದ ಭಾಗವಾದ ಮಾಯಾಂಟುಯಾಕು ಅಭಯಾರಣ್ಯದಲ್ಲಿದೆ. ಈ ಕುದಿಯುತ್ತಿರುವ ನೀರಿನ ನದಿಯು ಪ್ರಕೃತಿಯ ಕುತೂಹಲಕಾರಿ ತಾಣಗಳಲ್ಲಿ ಒಂದಾಗಿದೆ. ಪೆರುವಿನ ಈ ನದಿಯನ್ನು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ.
ಮಿಸ್ಸಿಸಿಪ್ಪಿ ನದಿ
ಮಿಸ್ಸಿಸಿಪ್ಪಿ ನದಿಯು ಉತ್ತರ ಅಮೇರಿಕಾ ಖಂಡದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಇದು ವಿಶ್ವದ 4 ನೇ ಅತಿ ಉದ್ದ ಮತ್ತು ನೀರು ಹರಿಯುವ ಪ್ರಮಾಣದಲ್ಲಿ 15 ನೇ ಅತಿ ದೊಡ್ಡ ನದಿ ಎಂದು ಗುರುತಿಸಲ್ಪಟ್ಟಿದೆ. ಈ ನದಿಯು ಹಲವಾರು ರಾಜ್ಯಗಳ ಮೂಲಕ ಚಲಿಸುತ್ತದೆ. ಮಿಸ್ಸಿಸಿಪ್ಪಿ ನದಿಯಲ್ಲಿ ಕೆಲವು ಅಪಾಯಕಾರಿ ಬುಲ್ ಶಾರ್ಕ್ ಮತ್ತು ಪೈಕ್ ಮೀನುಗಳಿಗೆ ನೆಲೆಯಾಗಿದೆ. ಇವು ಸಾಕಷ್ಟು ಅಪಾಯಕಾರಿ ಎಂದು ಭಾವಿಸಲಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ಯಾವುದೇ ಕಾರಣಕ್ಕೂ ಈಜುವುದಕ್ಕೆ ಶಿಫಾರಸ್ಸು ಮಾಡಲಾಗುವುದಿಲ್ಲ. ಅಲ್ಲದೆ, ನದಿಯು ಹಲವಾರು ಕುತೂಹಲಕಾರಿ ಒಳ ಪ್ರವಾಹಗಳನ್ನು ಕೂಡ ಒಳಗೊಂಡಿದೆ.
ನೈಲ್ ನದಿ
ನೈಲ್ ನದಿಯು ಆಫ್ರಿಕಾದಲ್ಲಿ ಉತ್ತರಾಭಿಮುಖವಾಗಿ ಹರಿಯುವ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಅಲ್ಲದೆ, ಈ ನದಿಯು ವಿಶ್ವದ ಅತ್ಯಂತ ಉದ್ದದ ನದಿ ಎಂದು ಪರಿಗಣಿಸಲಾಗಿದೆ. ಇತ್ತೀಚಿನ ಅನ್ವೇಷಣೆಗಳು ಅಮೆಜಾನ್ ನದಿಯೇ ಬಹುಶಃ ಜಗತ್ತಿನ ಅತಿ ಉದ್ದದ ನದಿಯಾಗಿದೆಯೆಂದು ಸೂಚಿಸಲಾಗುತ್ತದೆ.ಈ ನದಿಯು ಮಾರಣಾಂತಿಕ ರೋಗ ವಾಹಕ ಸೊಳ್ಳೆಗಳನ್ನು ಹೊಂದಿದೆ.
ನೈಲ್ ನದಿಯು 11 ದೇಶಗಳ ಮೂಲಕ ಹರಿಯುತ್ತದೆ ಮತ್ತು ಮೆಡಿಟರೇನಿಯನ್ ಸಮುದ್ರವನ್ನು ಸಂಧಿಸುತ್ತದೆ. ಇಲ್ಲಿ ಮೊಸಳೆಗಳು, ಹಿಪಪಾಟಮಸ್ಗಳು, ವಿಷಕಾರಿ ಹಾವುಗಳು, ಮಾರಣಾಂತಿಕ ಸೊಳ್ಳೆಗಳಿಗೆ ನೆಲೆಯಾಗಿರುವುದರಿಂದ ಈ ನದಿಯನ್ನು ಅತ್ಯಂತ ಅಪಾಯಕಾರಿ ಎಂದು ಕರೆಯಲಾಗುತ್ತದೆ.
ವಾರ್ಫ್ ನದಿ
ವಾರ್ಫ್ ನದಿಯು ಇಂಗ್ಲೆಂಡ್ನ ಯಾರ್ಕ್ಷೈರ್ ಡೇಲ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಟ್ಟುವ ನದಿಯಾಗಿದೆ. ಇದರ ಕಣಿವೆಯನ್ನು ವಾರ್ಫೆಡೇಲ್ ಎಂದು ಕರೆಯಲಾಗುತ್ತದೆ. ಈ ನದಿಯು 65 ಮೈಲಿಗಳಷ್ಟು ಉದ್ದವಾಗಿದ್ದು, ಬ್ರಿಟಿನ್ ನ 21 ನೇ ಅತಿ ಉದ್ದದ ನದಿಯಾಗಿದೆ. ಈ ನದಿಯು ಅಸಂಖ್ಯಾತ ಗುಪ್ತ ಸುರಂಗಗಳಿಗೆ ನೆಲೆಯಾಗಿರುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ. ಒಮ್ಮೆ ಈ ನದಿಯಲ್ಲಿ ಬಿದ್ದರೆ ಮತ್ತೆ ಹಿಂದಿರುಗಲು ಅಸಾಧ್ಯ ಎನ್ನುತ್ತಾರೆ ಬಲ್ಲವರು.