ಹುಬ್ಬಳ್ಳಿ: ಅದು ಉತ್ತರ ಕರ್ನಾಟಕ ಭಾಗದ ಅತ್ಯಂತ ಪ್ರಭಾವ ಶಾಲಿ ರಾಜಕೀಯ ಇತಿಹಾಸವುಳ್ಳ ಮನೆತನ.
ರಾಜ್ಯ ರಾಜಕಾರಣದಲ್ಲಿ ಅಜ್ಜ ಮಗ, ಮೊಮ್ಮಗ ಹೀಗೆ ಮೂರು ತಲೆಮಾರಿನ ರಾಜಕೀಯ ಇತಿಹಾಸವಿರುವ ಬೊಮ್ಮಾಯಿ ಕುಟುಂಬಕ್ಕೆ ಮೊದಲ ಈ ಚುನಾವಣೆಯಲ್ಲಿ ಸೋಲಿನ ಪರಂಪರೆಯೂ ಇದೆ. ಪ್ರಸಕ್ತ ಉಪ ಚುನಾವಣೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭರತ್ ಬೊಮ್ಮಾಯಿ ಕೂಡ ಪ್ರಥಮ ಚುನಾವಣೆಯಲ್ಲಿ ಸೋಲುವ ಮೂಲಕ ಆ ಪರಂಪರೆ ಮುಂದುವರಿದಿದೆ.
IPL Auction 2025: ಚೆನ್ನೈಗೆ ರೀ ಎಂಟ್ರಿ ಕೊಟ್ಟ ಸ್ಪಿನ್ನರ್ ಅಶ್ವಿನ್: 9.75 ಕೋಟಿಗೆ ಸೇಲ್!
ಬಸವರಾಜ ಬೊಮ್ಮಾಯಿಯವರ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಇವರ ಪುತ್ರನಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಇವರ ಪುತ್ರ ಭರತ್ ಬೊಮ್ಮಾಯಿ ಚುನಾವಣಾ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂವರು ತಾವು ಎದುರಿಸಿರುವ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.
ವಕೀಲರಾಗಿದ್ದ ಎಸ್ ಆರ್.ಬೊಮ್ಮಾಯಿ ಪ್ರಥಮ ಬಾರಿಗೆ 1962ರಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಕೆ. ಕಾಂಬಳೆ ವಿರುದ್ಧ ಸೋಲು ಅನುಭವಿಸಿದ್ದರು. 1967ರಲ್ಲಿ ಆದೇ ಕ್ಷೇತ್ರದಿಂದ ಕಾಂಗ್ರೆಸ್ನ ಟಿ.ಕೆ ಕಾಂಬಳೆ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ನಂತರದಲ್ಲಿ ಎಸ್.ಆರ್ .ಬೊಮ್ಮಾಯಿ ಜನತಾ ಪಕ್ಷದ ಹುರಿಯಾಳಾಗಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ 1978 ರಿಂದ 1985 ಚುನಾವಣೆಯಲ್ಲಿ ಸತತ ಗೆಲವು ಸಾಧಿಸಿದ್ದರು. 1988-89 ರಲ್ಲಿ ರಾಜ್ಯದ ನಾಲ್ಕನೇ ಮುಖ್ಯಮಂತ್ರಿಯಾಗಿದ್ದರು. ಜಗದೀಶ್ ಶೆಟ್ಟರ್ ಎದುರು ಮೊದಲ ಸೋಲು 1994ರ ಚುನಾವಣೆಯಲ್ಲಿ ಎಸ್. ಆರ್. ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕೇತ್ರದಿಂದ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿದ್ದರು.
ಅದೇ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ ಜಗದೀಶ ಶೆಟ್ಟರ್ ವಿರುದ್ಧ ಬಸವರಾಜ ಬೊಮ್ಮಾಯಿ ಸೋಲು ಅನುಭವಿಸಿದ್ದರು. ನಂತರದಲ್ಲಿ ಬಸವರಾಜ ಬೊಮ್ಮಾಯಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2008 ರಿಂದ 2024 ರವರೆಗೆ ಸತತ ನಾಲ್ಕು ಬಾರಿ ಗೆದ್ದಿದ್ದರು. 2021ರಿಂದ 2023 ವರೆಗೆ ರಾಜ್ಯದಲ್ಲಿ 23ನೇ ಮುಖ್ಯಮಂತ್ರಿಯೂ ಆಗಿದ್ದರು.
ಅಜ್ಜ, ಅಪ್ಪನ ಹಾದಿಯಲ್ಲಿ ಮಗ!
ಅದೇ ರೀತಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ತಂದೆ ಸ್ಪರ್ಧಿಸಿದ ಚುನಾವಣೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರೂ ಯಾವುದೇ ಚುನಾವಣೆ ಎದುರಿಸಿರಲಿಲ್ಲ. ಶಿಗ್ಗಾವಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಸವರಾಜ ಬೊಮ್ಮಾಯಿ 2024ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಶಿಗ್ಗಾವಿ ಕ್ಷೇತ್ರಕ್ಕೆ 2024 ನವೆಂಬರ್ 13 ರಂದು ನಡೆದ ಉಪ ಚುನಾವಣೆಗೆ ಪ್ರಥಮ ಬಾರಿಗೆ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಥಮ ಚುನಾವಣೆಯಲ್ಲಿಯೇ ಕಾಂಗ್ರೆಸ್ ಯಾಸೀರ್ ಖಾನ್ ಪಠಾಣ ವಿರುದ್ಧ 13,448 ಮತಗಳಿಂದ ಸೋಲು ಅನುಭವಿಸುವ ಮೂಲಕ ಬೊಮ್ಮಾಯಿ ಕುಟುಂಬದ ಮೊದಲ ಚುನಾವಣೆ ಸೋಲಿನ ಪಡೆಪದೆ ಪುನರಾವರ್ತನೆಯಾದಂತಾಗಿದೆ.