ಕಬ್ಬು ಬೆಳೆಯುವ ಎಲ್ಲ ಜಿಲ್ಲೆಗಳ ಸರಾಸರಿ ಆಧಾರದಲ್ಲಿ ನೋಡಿದಾಗ ಒಂದು ಎಕರೆಗೆ 28ರಿಂದ 30 ಟನ್ ಇಳುವರಿ ತೆಗೆಯಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ರೈತರು ಒಂದು ಎಕರೆಗೆ ಸರಾಸರಿ 75 ಟನ್ವರೆಗೆ ಕಬ್ಬು ಬೆಳೆದರೆ, ಮಂಡ್ಯ ಜಿಲ್ಲೆಯ ರೈತರು ಎಕರೆಗೆ ಸರಾಸರಿ 40 ಟನ್ ಇಳುವರಿ ತೆಗೆಯುತ್ತಾರೆ. ಆದರೆ ಬೆಳಗಾವಿ ಜಿಲ್ಲೆಯ ರೈತರೊಬ್ಬರು ವಾರ್ಷಿಕ ಸರಾಸರಿ 90 ಟನ್ ಕಬ್ಬು ಬೆಳೆಯುವ ಮುಲಕ ಗಮನಸೆಳೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆ, ಅಥಣಿ ತಾಲೂಕಿನ ಶೇಡಬಾಳ ಗ್ರಾಮದ ಕಬ್ಬು ಬೆಳೆಗಾರ ಸುರಗೌಡ ರಾಯಗೌಡ ಪಾಟೀಲ ಅವರು 2019ರಲ್ಲಿ ಒಂದು ಎಕರೆಗೆ ಬರೋಬ್ಬರಿ 148 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದರು.
ರಾಜ್ಯ ಒಂದೇ ಆದರೂ ಕಬ್ಬು ಇಳುವರಿಯಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ. ವ್ಯತ್ಯಾಸವಾದರೂ 10-20 ಟನ್ ಆಗಬಹುದು. ಆದರೆ 70-100 ಟನ್ ವರೆಗೆ ವ್ಯತ್ಯಾಸವಾಗಲು ಕಾರಣವೇನು ಎಂಬುದು ಹಲವು ರೈತರ ಪ್ರಶ್ನೆ. ಇದಕ್ಕೆ ಉತ್ತರ. ಆಯಾ ಪ್ರದೇಶದ ಮಣ್ಣಿನ ಗುಣ, ವಾತಾವರಣ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಕಬ್ಬು ಬೆಳೆಯುವ ರೈತರು ಅನುಸರಿಸುವ ವಿಧಾನ. ಬಳಸುವ ಪೋಷಕಾಂಶಗಳು ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆ ಪ್ರಮಾಣ. ದಾವಣಗೆರೆ, ಬಿಜಾಪುರ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ದಶಕಗಳ ಹಿಂದೆ ಸಕ್ಕರೆ ಕಾರ್ಖಾನೆಗಳು ಆರಂಭವಾದಾಗ ಅಲ್ಲಿನ ರೈತರು ಪ್ರತಿ ಎಕರೆಗೆ ಸರಾಸರಿ 50 ರಿಂದ 70 ಟನ್ ಕಬ್ಬು ಬೆಳೆಯುತ್ತಿದ್ದರು. ಆದರೆ ವರ್ಷಗಳು ಉರುಳಿದಂತೆ ಇಳುವರಿ ಕುಸಿಯುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಅತಿಯಾದ ರಾಸಾಯನಿಕ ಮತ್ತು ಅಸಮರ್ಪಕ ಪೋಷಕಾಂಶಗಳ ಬಳಕೆ
ಅಸಮರ್ಪಕ ಪೋಷಣೆ
ಕಬ್ಬು ಒಂದು ನೀರಾವರಿ ಬೆಳೆಯಾಗಿದ್ದು, ಇಲ್ಲಿ ಕಾಲಕಾಲಕ್ಕೆ ಅಗತ್ಯ ಪ್ರಮಾಣದ ನೀರು ಬಿಡಬೇಕಾಗುತ್ತದೆ. ಇದಕ್ಕಿಂತಲು ಮುಖ್ಯವಾಗಿ ಬೆಳೆಗೆ ಯಾವ ಹಂತದಲ್ಲಿ ಪೋಷಕಾಂಶಗಳನ್ನು ನೀಡಬೇಕು ಎಂಬುದು ರೈತರಿಗೆ ತಿಳಿದಿರಬೇಕು. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳ ರೈತರು ಕಬ್ಬು ಬೆಳೆಗೆ ಸಮರ್ಪಕವಾಗಿ ಪೋಷಕಾಂಶಗಳನ್ನು ನೀಡುತ್ತಿಲ್ಲ
ಎಂಬುದು ನಿವೃತ್ತ ಕೃಷಿ ಅಧಿಕಾರಿ ಎನ್.ಆರ್.ಹರೀಶ್ ಅವರ ಆರೋಪ. ಅತಿ ಹೆಚ್ಚು ಇಳುವರಿ ತೆಗೆಯುವ ಉದ್ದೇಶದಿಂದ ಮಿತಿ ಮೀರಿದ ಪ್ರಮಾಣದಲ್ಲಿ ಭೂಮಿಗೆ ರಾಸಾಯನಿಕಗಳನ್ನು ಹಾಕಲಾಗುತ್ತದೆ. ಆದರೆ, ಬೆಳೆ ಕಟಾವು ಮಾಡಿದ ಬಳಿಕ ಭೂಮಿಯ ಫಲವತ್ತತೆ ಹೆಚ್ಚಿಸುವತ್ತ ರೈತರು ಗಮನಹರಿಸುವುದಿಲ್ಲ. ಬೆಳೆ ಕಟಾವು ಮಾಡಿದ ನಂತರ, ಜಮೀನಿಗೆ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ ಅಥವಾ ಹಸಿರೆಲೆ ಗೊಬ್ಬರ ನೀಡುವುದು ಬಹುಮುಖ್ಯ. ಆದರೆ ರೈತರು ಈ ಪ್ರಮುಖ ಪ್ರಕ್ರಿಯೆಯನ್ನೇ ಬದಿಗಿರಿಸಿ, ಕಟಾವು ಮಾಡಿದ ಕೆಲವೇ ದಿನಗಳ ಬಳಿಕ ಮತ್ತೆ ಕಬ್ಬು ನಾಟಿ ಮಾಡಲು ತಯಾರಾಗುತ್ತಾರೆ. ಇದರೊಂದಿಗೆ ಹಲವು ವರ್ಷಗಳಿಂದ ಒಂದೇ ಮಾದರಿಯ ಬೆಳೆ ಬೆಳೆಯುತ್ತಿರುವುದು ಕೂಡ ಇಳುವರಿ ಕುಸಿತಕ್ಕೆ ಕಾರಣವಾಗುತ್ತಿದೆ.
ಇಳುವರಿ ಹೆಚ್ಚುಸಲು ಹೀಗೆ ಮಾಡಿ
ನಾಟಿ ಮಾಡುವ ಸಮಯವು ಉತ್ತಮ ಕಬ್ಬು ಬೆಳೆಗೆ ಅತ್ಯಂತ ಪ್ರಮುಖವಾದ ಸಮಯವಾಗಿದೆ. ನಾಟಿಗೂ ಮುನ್ನ ಭೂಮಿಗೆ ಅಗತ್ಯವಿರುವ ಕೊಟ್ಟಿಗೆ, ಸಾವಯವ ಗೊಬ್ಬರ ನೀಡಿರಬೇಕು. ಬಳಿಕ ಬೆಳೆ ಮೇಲೆ ಸೂರ್ಯನ ಬೆಳಕು ಸರಾಗವಾಗಿ ಬೀಳುವ ರೀತಿಯಲ್ಲಿ ನಾಟಿ ಮಾಡಬೇಕು. ಪ್ರಾರಂಭದಲ್ಲೇ ಮಣ್ಣಿನ ಪರೀಕ್ಷೆ ಮಾಡಿಸಿ, ಉತ್ತಮ ಇಳುವರಿ ಕೊಡುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ಒಂದು ಟನ್ ಕಬ್ಬು ಬೆಳೆಯಲು ಅಗತ್ಯ ಪಪ್ರಮಾಣದ ರಂಜಕ, ಸಾರಜನಕ, ಪೊಟ್ಯಾಷ್, ಸತು, ಮ್ಯಾಂಗನೀಸ್, ಶುದ್ಧ ತಾಮ್ರ ಹಾಗೂ ಬೋರಾನ್ ಅವಶ್ಯಕವಾಗಿ ಬೇಕಾಗುತ್ತದೆ. ಇದರೊಂದಿಗೆ ಮಣ್ಣಿನ ಲವಣಾಂಶವನ್ನು ಸಮಪ್ರಮಾಣದಲ್ಲಿ ಕಾಪಾಡಿಕೊಂಡಿರಬೇಕು.
ಈ ಅಂಶಗಳು ಗಮನದಲ್ಲಿರಲಿ
• ನಾಟಿ ಮಾಡುವಾಗ ಕಬ್ಬಿನ ಬೀಜಗಳನ್ನು 10-15 ನಿಮಿಷ ಸುಣ್ಣದ ತಿಳಿ ನೀರಿನಲ್ಲಿ ನೆನೆಯಿಸಿ ನಂತರ ನಾಟಿ ಮಾಡಬೇಕು.
• ನೀರಿನ ಲಭ್ಯತೆಗೆ ಆನುಗುಣವಾಗಿ ಕಬ್ಬು ಬೆಳೆಯ ಕ್ಷೇತ್ರ ನಿರ್ಧರಿಸಬೇಕು. 2.5 – 2.5 ಅಡಿ ಅಥವಾ 3-6-3 ಅಡಿ ಅಂತರದಲ್ಲಿ ಕಬ್ಬು ನಾಟಿ ಮಾಡುವುದು ಸೂಕ್ತ.
• ನಾಟಿಗೆ ಮುನ್ನ ಹಾಗೂ ಕುಳೆ ಕಬ್ಬಿನಲ್ಲಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ, 1 ಟನ್ ಎರೆಹುಳು ಗೊಬ್ಬರ ಬಳಸಬೇಕು.
• ಕಾಲುವೆ ನೀರಿಗಿಂತಲೂ ಹನಿ ನೀರಾವರಿ ಪದ್ಧತಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿದಾಗ ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು.
• ನಾಟಿ ಕಬ್ಬು ಬೆಳೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಒಣಗಿದ ಕಬ್ಬಿನ ಕೆಳ ಭಾಗದ ಎಲೆಗಳನ್ನು ಸುಲಿದು ಸಾಲುಗಳ ಮಧ್ಯ ಹೊದಿಕೆ ಮಾಡುವುದರಿಂದ ಮಣ್ಣಿನಲ್ಲಿರುವ ತೇವಾಂಶ ಕಾಪಾಡಿಕೊಳ್ಳಬಹುದು.