ವಿವಿಧ ದೇಶಗಳ ಕರೆನ್ಸಿ ಮೌಲ್ಯ ದಿನದಿನಕ್ಕೂ ನೆಲ ಕಚ್ಚುತ್ತಿದೆ. ವಿದೇಶೀ ವಿನಿಮಯ ಮೀಸಲು ಪಾತಾಳಕ್ಕೆ ಇಳಿದಿವೆ. ಅವೆಷ್ಟು ರಾಷ್ಟ್ರಗಳು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿವೆಯೋ! ಶ್ರೀಲಂಕಾ, ಲೆಬನಾನ್, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ಈಗಾಗಲೇ ಸಾಲ ಹಿಂತಿರುಗಿಸಲು ವಿಫಲವಾಗಿವೆ. ಮಧ್ಯ ಪ್ರಾಚ್ಯದ ಲೆಬನಾನ್ ದೇಶದ ಜನರು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ.
ಬೆಲೆ ಏರಿಕೆ ನಡುವೆ ಜೀವನ ನಡೆಸುವುದೇ ದುಸ್ತರವಾಗಿರುವ ಹಿನ್ನೆಲೆ ದೇಶದ ಶೇ 26ರಷ್ಟು ಮಕ್ಕಳನ್ನು ಶಾಲೆಯಿಂದ ಬಿಡಿಸಲಾಗಿದೆ ಎಂಬ ಮಾಹಿತಿಯನ್ನು ಯುನಿಸೆಫ್ ವರದಿ ತಿಳಿಸಿದೆ. ಯುನಿಸೆಫ್ ಬಿಡುಗಡೆ ಮಾಡಿದ ವರದಿಯಲ್ಲಿ ಏಪ್ರಿಲ್ನಲ್ಲಿ ಶೇ 18ರಷ್ಟು ಮಕ್ಕಳು ಶಾಲೆ ತೊರೆದಿದ್ದರೆ, ಇದೀಗ ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ಶೇ 26ರಷ್ಟಾಗಿದೆ ಎಂದು ತಿಳಿಸಿದೆ.
ದಕ್ಷಿಣ ಲೆಬನಾನ್ನಲ್ಲಿ ಹಗೆತನದ ತೀವ್ರತೆ ಕಾರಣದಿಂದ 2023ರ ಅಕ್ಟೋಬರ್ನಿಂದ ಹಲವು ಶಾಲೆಗಳನ್ನು ಮುಚ್ಚಲಾಗಿದೆ. ಇದು 6 ಸಾವಿರ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಮಾಹಿತಿ ನೀಡಿದೆ. ವರದಿಯಲ್ಲಿ ದೇಶದಲ್ಲಿ ಗಗನಕ್ಕೇರುತ್ತಿರುವ ಬೆಲೆಯುಂದಾಗಿ ಕುಟುಂಬಗಳು ಒಂದು ಹೊತ್ತಿನ ಊಟ ಮತ್ತು ಸೂರಿಗೂ ಕಷ್ಟ ಪಡುವಂತೆ ಆಗಿದೆ. ಸಮೀಕ್ಷೆಯಲ್ಲಿ ಬಯಲಾದ ಅಂಶದ ಅನುಸಾರ,
ಕುಟುಂಬಗಳು ಮನೆಯ ನಿರ್ವಹಣೆಗಾಗಿ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದು, ಕಳೆದ ಏಪ್ರಿಲ್ಗೆ ಹೋಲಿಕೆ ಮಾಡಿದಾಗ ಮಕ್ಕಳ ದುಡಿಮೆಯ ಸಂಖ್ಯೆ ಶೇ 4ರಷ್ಟು ಹೆಚ್ಚಾಗಿದೆ. ಈ ನಡುವೆ 10ರಲ್ಲಿ 8 ಕುಟುಂಬಗಳು ಮನೆ ನಿರ್ವಹಣೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ತರಲು ಸಾಲದ ಮೊರೆ ಹೋಗುತ್ತಿವೆ. ಈ ಸಂಖ್ಯೆ ಕಳೆದ ಆರು ತಿಂಗಳಲ್ಲಿ ಶೇ 16ರಷ್ಟು ಹೆಚ್ಚಾಗಿದೆ. ಜೊತೆಗೆ ಆರೋಗ್ಯ ಚಿಕಿತ್ಸೆ ಮಾಡುತ್ತಿದ್ದ ವ್ಯಯವನ್ನು ಶೇ 81ರಷ್ಟು ತಗ್ಗಿಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.