ಇಂದು ಬಹುತೇಕ ಮನೆಗಳಲ್ಲಿ ನೀರು ಸಂಗ್ರಹಕ್ಕೆ ವಾಟರ್ ಟ್ಯಾಂಗ್ ಅಳವಡಿಸಿರುತ್ತೇವೆ. ಇದರ ಮೂಲಕ ಮನೆಯೊಳಗೆ ಸದಾ ನೀರಿನ ಸೌಕರ್ಯ ಇರುವಂತೆ ನೋಡಿಕೊಳ್ಳುತ್ತೇವೆ. ಆದರೆ, ಈ ಟ್ಯಾಕ್ನ ಶುಚಿತ್ವ ಬಗ್ಗೆ ಬಹುತೇಕರು ಗಮನಹರಿಸುವುದಿಲ್ಲ. ಬೃಹದಾಕಾರದ ಈ ಟ್ಯಾಂಕ್ ಅನ್ನು ನಿಯಮಿತವಾಗಿ ಶುಚಿ ಮಾಡುವುದು ಅತ್ಯವಶ್ಯಕವಾಗಿದೆ. ದೀರ್ಘಕಾಲದಿಂದ ನೀರು ಸಂಗ್ರಹವಾಗುವ ಈ ನೀರು ಅಶುಚಿತ್ವಗೊಂಡರೆ ಅದು ಮನೆಯವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನೀರಿನ ಟ್ಯಾಂಕನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನೀರಿನ ಟ್ಯಾಂಕ್ ಒಳಗೆ ಸ್ವಚ್ಛಗೊಳಿಸಲು ತುಂಬಾನೇ ಸಮಯ ತಗಲುತ್ತದೆ, ಆದರೆ ಈ ಕೆಲವು ಸಲಹೆಗಳನ್ನು ಪಾಲಿಸಿದ್ರೆ ಸುಲಭವಾಗಿ ಟ್ಯಾಂಕ್ ಸ್ವಚ್ಛಗೊಳಿಸಬಹುದು
ವಿನೆಗರ್ ಮತ್ತು ಅಡುಗೆ ಸೋಡಾ ಬಳಸಿ : ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತೀರಿ ಎಂದಾದರೆ ವಿನೆಗರ್ ಮತ್ತು ಅಡುಗೆ ಸೋಡಾ ಬಳಸಬಹುದು. ಎರಡು ಕಪ್ ಬಿಳಿ ವಿನೆಗರ್ ಮತ್ತು ಅರ್ಧ ಕಪ್ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ. ಅದನ್ನು ಬ್ರಷ್ ಅಥವಾ ಸ್ಕ್ರಬ್ನಿಂದ ಟ್ಯಾಂಕ್ ಗೋಡೆಗಳಿಗೆ ಚೆನ್ನಾಗಿ ಉಜ್ಜಿಕೊಂಡು ಆ ಬಳಿಕ ಶುದ್ಧ ನೀರಿನಿಂದ ತೊಳೆದರೆ ಫಳಫಳನೆ ಹೊಳೆಯುತ್ತದೆ.
ಸುಣ್ಣ ಬಳಸಿ ಸ್ವಚ್ಛಗೊಳಿಸಿ : ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಬಿಳಿ ಸುಣ್ಣ ಬಳಸಬಹುದು. ಮೊದಲಿಗೆ ಸ್ವಲ್ಪ ನೀರಿಗೆ ಸುಣ್ಣವನ್ನು ಬೆರೆಸಿ ನೀರಿನ ಟ್ಯಾಂಕಿನ ಗೋಡೆಗಳಿಗೆ ಹಚ್ಚಿ ಎರಡರಿಂದ ಮೂರು ಗಂಟೆಗಳ ಕಾಲ ಹಾಗೆ ಬಿಡಿ. ಈ ಸುಣ್ಣವು ಕೊಳೆಯನ್ನು ತೆಗೆದುಹಾಕುವುದಲ್ಲದೆ, ರೋಗಾಣುಗಳನ್ನು ಕೊಲ್ಲುತ್ತದೆ.
ಬ್ಲೀಚಿಂಗ್ ಪೌಡರ್ : ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು 10-15 ಲೀಟರ್ ನೀರಿನಲ್ಲಿ 200 ಗ್ರಾಂ ಬ್ಲೀಚಿಂಗ್ ಪೌಡರ್ ಮಿಶ್ರಣ ಮಾಡಿ. ಈ ದ್ರಾವಣವನ್ನು ಟ್ಯಾಂಕ್ಗೆ ಸುರಿಯಿರಿ. ಸ್ಕ್ರಬರ್ ಸಹಾಯದಿಂದ ಗೋಡೆಗಳ ಮೇಲೆ ಉಜ್ಜಿ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
ಕ್ಲೋರಿನ್ ಮಾತ್ರೆಗಳು : ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಲು ಕ್ಲೋರಿನ್ ಮಾತ್ರೆಗಳನ್ನು ಬಳಸಬಹುದು. ಇದು ಟ್ಯಾಂಕಿನಲ್ಲಿರುವ ಕೊಳೆಗಳನ್ನು ತೆಗೆದು ಹಾಕಿ, ಸ್ವಚ್ಛಗೊಳಿಸುತ್ತದೆ.
ಟ್ಯಾಂಕ್ ಮುಚ್ಚಳ ಮುಚ್ಚಿಡುವ ಅಭ್ಯಾಸವಿರಲಿ : ಧೂಳು ಮತ್ತು ಸೂರ್ಯನ ಬೆಳಕಿನಿಂದ ರಕ್ಷಿಸಲು ನೀರಿನ ಟ್ಯಾಂಕ್ ಅನ್ನು ಯಾವಾಗಲೂ ಮುಚ್ಚಿಡಿ, ಇದು ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಡೆಯುತ್ತದೆ. ಅದಲ್ಲದೇ, ಪ್ರತಿದಿನ ಟ್ಯಾಂಕ್ನಿಂದ ನೀರನ್ನು ಬಳಸಿ, ನೀರು ತುಂಬಿ ತುಳುಕದಂತೆ ನೋಡಿಕೊಳ್ಳಿ.