ಬೆಂಗಳೂರು:– ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡುತ್ತಿದ್ದವನಿಗೆ ಬೆಂಗಳೂರು ಮೆಟ್ರೋ ನಿಗಮ ನಿಯಮಿತದ ಅಧಿಕಾರಿಗಳು ಆತನ ಮೇಲೆ ಪ್ರಕರಣ ದಾಖಲಿಸಿ ₹500 ದಂಡ ವಸೂಲಿ ಮಾಡಿದ್ದಾರೆ.
ಮಲ್ಲಿಕಾರ್ಜುನ್ (20) ಎಂಬಾತ ದಂಡ ತೆತ್ತಿದ್ದಾನೆ. ಮೆಟ್ರೋದ ಒಳಗಡೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯಿಂದ ದಂಡ ವಸೂಲಿ ಮಾಡಿರುವ ಮೊದಲ ಪ್ರಕರಣ ಇದಾಗಿದೆ. ಬಿಎಂಆರ್ಸಿಎಲ್ ಈತನ ವಿರುದ್ಧ ಮೆಟ್ರೋ ಕಾಯ್ದೆ ಸೆಕ್ಷನ್ 59ರ ಅಡಿ ಪ್ರಯಾಣಿಕರಿಗೆ ತೊಂದರೆ ನೀಡಿದ ಪ್ರಕರಣ ದಾಖಲಿಸಿಕೊಂಡಿದೆ.
ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ₹150 ಕೊಟ್ಟು ಒಂದು ದಿನದ ಕಾರ್ಡ್ ತೆಗೆದುಕೊಂಡ ಈತ ₹50 ರಿಚಾರ್ಜ್ ಮಾಡಿಸಿಕೊಂಡಿದ್ದಾನೆ. ಬಳಿಕ ರೈಲನ್ನೇರಿ ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ‘ನಾನು ಮೂಗ ಹಾಗೂ ಕಿವುಡ, ಸಹಾಯ ಮಾಡಿ’ ಎಂದು ಬರೆದಿದ್ದ ಚೀಟಿಗಳನ್ನು ಕೊಟ್ಟು ಭಿಕ್ಷೆ ಬೇಡಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತೆ ಸಿಬ್ಬಂದಿ ಎಲ್ಲಾ ನಿಲ್ದಾಣಗಳಿಗೂ ಈ ಬಗ್ಗೆ ಅಲರ್ಟ್ ಮಾಡಿದ್ದರು. ಸುಮಾರು ಒಂದು ಗಂಟೆ ಬಳಿಕ ಯಶವಂತಪುರಕ್ಕೆ ಬಂದು ಕಾರ್ಡ್ ಹಿಂದಿರುಗಿಸುವ ವೇಳೆ ಈತನನ್ನು ಪತ್ತೆ ಮಾಡಲಾಯಿತು. ಈ ವೇಳೆ ಈತನ ಜೇಬಿನಲ್ಲಿ ₹960 ಇತ್ತು. ಬಳಿಕ ಬಿಎಂಆರ್ಸಿಎಲ್ ಸಿಬ್ಬಂದಿ ಮಲ್ಲಿಕಾರ್ಜುನ್ನನ್ನು ತಾವೇ ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ.
ಈ ವೇಳೆ ಆತ ಕಿವುಡ, ಮೂಗನಾಗಿರುವುದು ದೃಢಪಟ್ಟಿದೆ ಎನ್ನಲಾಗಿದೆ.