ಚಾಮರಾಜನಗರ:- ಮಹದೇಶ್ವರ ಬೆಟ್ಟಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ವಾರಾಂತ್ಯ, ಕ್ರಿಸ್ಮಸ್ ರಜೆಗಳ ಅವಧಿಯಲ್ಲಿ ವಿವಿಧ ಉತ್ಸವಗಳಿಂದ ₹1.29 ಕೋಟಿ ಆದಾಯ ಬಂದಿದೆ.
ಶನಿವಾರ ₹17,11,509, ಭಾನುವಾರ ₹54,80,984 ಮತ್ತು ಕ್ರಿಸ್ಮಸ್ ದಿನ ₹57,34,215 ಆದಾಯ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಸೇವೆಗಳು, ಮಾಹಿತಿ ಕೇಂದ್ರ, ಲಾಡು ವಿತರಣೆ, ತೀರ್ಥ ಪ್ರಸಾದ, ಬ್ಯಾಗ್, ಪಾರ್ಕಿಂಗ್, ಮಿಶ್ರ ಪ್ರಸಾದ, ಅಕ್ಕಿ ಸೇವೆ, ಪುದುವಟ್ಟು ಸೇವೆ, ವಿಶೇಷ ಪ್ರವೇಶ ಶುಲ್ಕ, ಜನ ವಾಹನ ಕ್ಯಾಲೆಂಡರ್ ಹಾಗೂ ಇತರೆ ಸೇರಿ ವಿವಿಧ ವಿಭಾಗದಿಂದ ವಸೂಲಾದ ಮೊತ್ತಗಳು ಇದರಲ್ಲಿ ಸೇರಿವೆ. ಹುಂಡಿ ಕಾಣಿಕೆಯ ಹಣ ಇದರಲ್ಲಿ ಸೇರಿಲ್ಲ.
ಲಾಡು ಮಾರಾಟದಿಂದ ಶನಿವಾರ ₹3,90,875, ಭಾನುವಾರ ₹9,71,425 ಮತ್ತು ಸೋಮವಾರ ₹12,05,350 ಸಂಗ್ರಹವಾಗಿದೆ. ಮೂರು ದಿನಗಳ ಅವಧಿಯಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿದ್ದಾರೆ.