ಪೋಷಕಾಂಶಗಳಿಂದ ಕೂಡಿರುವ ಡ್ರೈ ಫ್ರೂಟ್ಸ್ಗಳಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ. ಡ್ರೈ ಪ್ರೂಟ್ಸ್ಗಳಲ್ಲಿ ಗೋಡಂಬಿ ಎಂದರೆ ಬಹಳಷ್ಟು ಜನರು ಇಷ್ಟ ಪಟ್ಟು ತಿನ್ನುತ್ತಾರೆ.
ಕ್ಯಾಶ್ಯೂ, ಕಾಜು ಎಂದೆಲ್ಲಾ ಕರೆಯುವ ಗೋಡಂಬಿಯನ್ನು ಬೆಳಗ್ಗಿನ ತಿಂಡಿಯಲ್ಲಿ, ಸಂಜೆಯ ಸ್ನಾಕ್ಸ್ನಲ್ಲಿ ತಿನ್ನುವವರಿದ್ದಾರೆ. ಫುಲಾವ್, ಘೀ ರೈಸ್ಗಳಲ್ಲಿ ಸೇರಿಸುತ್ತಾರೆ. ನೀವು ಗೋಡಂಬಿಯನ್ನು ಖರೀದಿಸಲು ಅಂಗಡಿಗೆ ಹೋದರೆ ಅಲ್ಲಿ ಹಲವಾರು ಬಗೆಯ ಉತ್ಪನ್ನಗಳನ್ನು ಕಾಣಬಹುದು. ಕಲಬೆರಕೆಯ ಯುಗದಲ್ಲಿ ಗೋಡಂಬಿಗೂ ಅದರ ಪ್ರಭಾವ ಬೀರಿದೆ.
ನೀವು ಖರೀದಿಸುವ ಗೋಡಂಬಿ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯುವುದಾದರೂ ಹೇಗೆ? ಈ ಗೊಂದಲ ನಿಮ್ಮಲ್ಲಿದ್ದರೆ ಅದಕ್ಕೆ ಸುಲಭದ ಮಾರ್ಗಗಳಿವೆ. ಉತ್ತಮ ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆಯೋ ಅದೇ ರೀತಿ ನಕಲಿ ಗೋಡಂಬಿ ತಿನ್ನುವುದರಿಂದ ಆರೋಗ್ಯದ ಮೇಲೆ ಅಷ್ಟೇ ಕೆಟ್ಟ ಪರಿಣಾಮವಾಗುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಗೋಡಂಬಿ ಸಿಗುತ್ತದೆ ಎಂದು ಖರೀದಿಸಿ ತಂದರೆ ಅದರಿಂದ ತೊಂದರೆ ತಪ್ಪಿದ್ದಲ್ಲ. ಗೋಡಂಬಿಯ ಶುದ್ಧತೆಯನ್ನು ಗುರುತಿಸುವುದು ಹೇಗೆ? ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅದರ ಮುಖಾಂತರ ನೀವು ಖರೀದಿಸಿ ತಂದ ಗೋಡಂಬಿ ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ನೀವೇ ಸುಲಭವಾಗಿ ಪರೀಕ್ಷಿಸಬಹುದು.
ಗೋಡಂಬಿಯನ್ನು ಈ ರೀತಿಯಾಗಿ ಪರೀಕ್ಷಿಸಿ
1) ಬಣ್ಣದಿಂದ ಗುರುತಿಸಿ
ಗೋಡಂಬಿಯನ್ನು ಸಾಮಾನ್ಯವಾಗಿ ಬಣ್ಣದಿಂದಲೇ ಗುರುತಿಸಬಹುದು. ನಮಗೆ ತಿಳಿದಿರುವಂತೆ ಗೋಡಂಬಿಯ ಬಣ್ಣ ಸಂಪೂರ್ಣವಾಗಿ ಬಿಳಿಯಾಗಿರುತ್ತದೆ. ಆದರೆ ಅಶುದ್ಧ ಅಥವಾ ನಕಲಿ ಗೋಡಂಬಿಯು ತಿಳಿ ಹಳದಿ ಬಣ್ಣದಲ್ಲಿ ಕಾಣುತ್ತದೆ. ಹಾಗಾಗಿ ಅಂಗಡಿಗಳಲ್ಲಿ ಗೋಡಂಬಿ ಖರೀದಿಸುವಾಗ ಬಣ್ಣಕ್ಕೆ ಪ್ರಮುಖ್ಯತೆ ಕೊಡಿ. ಕೆಲವೊಮ್ಮೆ ಪ್ಯಾಕಿಂಗ್ ಮಾಡಿದ ಕವರ್ನ ಬಣ್ಣವನ್ನು ಗಮನಿಸಿ. ಯವಾಗಲೂ ಬಿಳಿ ಬಣ್ಣದ ಟ್ರಾನ್ಸಪರಂಟ್ ಕವರ್ನಲ್ಲಿರುವ ಗೋಡಂಬಿ ಖರೀದಿಸಿ.
2) ಗುಣಮಟ್ಟ ಪರಿಶೀಲಿಸಿ
ನೀವು ಗೋಡಂಬಿಯನ್ನು ಅದರ ಗುಣಮಟ್ಟದಿಂದ ಗುರುತಿಸಬಹುದು. ಶುದ್ಧ ಗೋಡಂಬಿ ಬೇಗ ಕೆಡುವುದಿಲ್ಲ. ಕಳಪೆ ಗುಣಮಟ್ಟದ ಗೋಡಂಬಿ ಬೇಗ ಕೆಡುತ್ತದೆ. ಮತ್ತು ಅವುಗಳಲ್ಲಿ ಹುಳುಗಳಾಗುತ್ತವೆ. ಆದ್ದರಿಂದ ಗೋಡಂಬಿ ಖರೀದಿಸುವ ಮೊದಲು ಅದರ ಗುಣಮಟ್ಟವನ್ನು ಪರಿಶೀಲಿಸಿ.
3) ಗೋಡಂಬಿಯ ಗಾತ್ರ ಪರೀಕ್ಷಿಸಿ
ಸಾಮಾನ್ಯವಾಗಿ ನಿಮಗೆ ನೋಡಿದ ತಕ್ಷಣ ತಿಳಿದು ಬಿಡುತ್ತದೆ. ಇದು ಉತ್ಕೃಷ್ಟ ಗುಣಮಟ್ಟದ ಗೋಡಂಬಿ ಹೌದೋ ಅಥವಾ ಅಲ್ಲವೋ ಎಂದು. ಏಕೆಂದರೆ ಅಸಲಿ ಗೋಡಂಬಿ ಸುಮಾರು 1 ಇಂಚಿನಷ್ಟು ಉದ್ದವಾಗಿರುತ್ತದೆ ಮತ್ತು ಸ್ವಲ್ಪ ದಪ್ಪದಾಗಿರುತ್ತದೆ. ನಕಲಿ ಗೋಡಂಬಿಯ ಗಾತ್ರ ಮತ್ತು ಆಕಾರದಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ. ಇದರಿಂದ ನೀವು ಸುಲಭವಾಗಿ ಕಂಡು ಹಿಡಿಯಬಹುದು.
4) ರುಚಿ ನೋಡಿ
ಅಸಲಿ ಗೋಡಂಬಿಗೂ ಮತ್ತು ನಕಲಿ ಗೋಡಂಬಿಗೂ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಅದು ನಿಮಗೆ ತಿಳಿಯುತ್ತದೆ. ಅಸಲಿ ಗೋಡಂಬಿಯನ್ನು ತಿನ್ನುವಾಗ ಅದು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುವುದಿಲ್ಲ. ಅದೇ ನಕಲಿ ಗೋಡಂಬಿಯು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ.
ಗೋಡಂಬಿಯ ಪ್ರಯೋಜನಗಳು
* ಇದು ಹೃದಯದ ಆರೋಗ್ಯ ಕಾಪಾಡುತ್ತದೆ. ಆಂಟಿಆಕ್ಸಿಡೆಂಟ್, ಪೊಟ್ಯಾಸಿಯಂ ಮತ್ತು ಮ್ಯಾಗ್ನೇಸಿಯಂನಿಂದ ಕೂಡಿರುವ ಗೋಡಂಬಿ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.