ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಹೌದು. ಆದರೆ ಹಾಲಿನ ಜತೆ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು ಅನ್ನೋದು ನಿಮಗೆ ಗೊತ್ತಾ. ಹಾಲಿನೊಂದಿಗೆ ಕೆಲವೊಂದು ಆಹಾರಗಳನ್ನು ಜತೆಯಾಗಿ ತಿನ್ನುವುದು ಹೊಟ್ಟೆನೋವು, ಸುಸ್ತು, ಗ್ಯಾಸ್ಟ್ರಿಕ್ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ದೀರ್ಘಕಾಲದ ವರೆಗೆ ಈ ರೀತಿಯ ತಪ್ಪು ಆಹಾರ ಸಂಯೋಜನೆಯನ್ನು ಸೇವಿಸುವುದನ್ನು ಮುಂದುವರಿಸಿದರೆ, ಜೀವಕ್ಕೇ ತೊಂದರೆಯಾಗುವ ಸಾಧ್ಯತೆಯೂ ಇದೆ. ಹಾಲಿನ ಜತೆ ತಿನ್ನಬಾರದ ಆಹಾರಗಳು ಇವು..
ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ
ಆಯುರ್ವೇದ ಕೂಡ ಹಾಲು ಹಾಗೂ ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವಿಸಲು ಸಲಹೆ ನೀಡುತ್ತದೆ. ಸಿಟ್ರಸ್ ಅಥವಾ ಆಮ್ಲೀಯ ವಸ್ತುಗಳನ್ನು ಹಾಲಿನೊಂದಿಗೆ ಸೇರಿಸಬಾರದು. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಹಾಲಿನೊಂದಿಗೆ ಸಂಯೋಜಿಸಬಾರದು. ಅದರಲ್ಲೂ ಮುಖ್ಯವಾಗಿ ಹಾಲು ತಿಂದ ತಕ್ಷಣ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಮುಂತಾದವುಗಳನ್ನು ಸೇವಿಸಬಾರದು. ಯಾಕೆಂದರೆ ಹಾಲು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಹೀಗಾಗಿ ಹಾಲು ಕುಡಿದು ನಿಂಬೆ ಅಥವಾ ಯಾವುದೇ ಸಿಟ್ರಸ್ ಹಣ್ಣನ್ನು ಸೇವಿಸಿದಾಗ, ಹಾಲು ಹೆಪ್ಪುಗಟ್ಟುತ್ತದೆ. ಇದು ಗ್ಯಾಸ್ ಮತ್ತು ಎದೆಯುರಿಗೆ ಕಾರಣವಾಗಬಹುದು. ಬಾಳೆಹಣ್ಣುಗಳನ್ನು ತಿಂದ ಬಳಿಕವೂ ಹಾಲನ್ನು ಕುಡಿಯಬಾರದು, ಚೆರ್ರಿ ಹಣ್ಣುಗಳನ್ನು ಹಾಲನ್ನು ಸಹ ಒಟ್ಟಿಗೆ ಸೇವಿಸಬಾರದು ಆದರೆ ಕೆಲವೊಂದು ಸಿಹಿ ಹಣ್ಣುಗಳಾದ ಮಾವಿನಹಣ್ಣು, ಬೆಣ್ಣೆಹಣ್ಣು, ಅಂಜೂರ, ಖರ್ಜೂರ ಈ ರೀತಿಯ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸಬಹುದು.
ಉಪ್ಪಿನ ಅಂಶ ಹೆಚ್ಚಿರುವ ಆಹಾರ ತಿಂದ ಬಳಿಕ ಹಾಲು ಕುಡಿಯಬಾರದು
ಹಾಲು ಕುಡಿಯುವ ಮೊದಲು ಉಪ್ಪಿನ ಅಂಶ ಹೆಚ್ಚಿರುವ ಆಹಾರಗಳನ್ನು ತಿನ್ನಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉಪ್ಪು (Salt) ಮತ್ತು ಹಾಲು ಒಟ್ಟಿಗೆ ಸೇವಿಸಿದರೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಉಪ್ಪಿನ ಅಂಶ ಹೆಚ್ಚಾಗಿ ಇರುವ ವಸ್ತುಗಳನ್ನು ತಿಂದರೆ, ಆ ವಸ್ತುವನ್ನು ಸೇವಿಸಿದ ಎರಡು ಗಂಟೆಗಳ ಬಳಿಕ ಹಾಲು ಕುಡಿಯುವುದು ಒಳ್ಳೆಯದು.
ಬೆಲ್ಲ
ಸಾಮಾನ್ಯವಾಗಿ, ಜನರು ಸಕ್ಕರೆಯ ಬದಲು ಬೆಲ್ಲವನ್ನು ಹಾಲಿಗೆ ಸೇರಿಸುತ್ತಾರೆ. ಇದು ಆರೋಗ್ಯಕರ ಆಯ್ಕೆಯಾಗಿದೆ, ಆದರೆ ಆಯುರ್ವೇದದಲ್ಲಿ, ಹಾಲಿನೊಂದಿಗೆ ಬೆಲ್ಲವು ಹೊಟ್ಟೆಗೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಇದರಿಂದ ಹೊಟ್ಟೆನೋವು ಉಂಟಾಗುವ ಸಾಧ್ಯತೆ ಇದೆ.
ಮಸಾಲೆಭರಿತ ಆಹಾರಗಳು
ಮಸಾಲೆಭರಿತ ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತವೆ, ಇದು ಹಾಲಿನೊಂದಿಗೆ ಸಂಯೋಜಿಸಿದಾಗ ಕೆಲವರಿಗೆ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಬಿಸಿ ಮೇಲೋಗರಗಳು, ಮೆಣಸುಗಳು ಮತ್ತು ಭಾರೀ ಮಸಾಲೆಗಳಂತಹ ಮಸಾಲೆಯುಕ್ತ ಆಹಾರಗಳು ಹಾಲಿನ ಜೊತೆಗೆ ಸೇವಿಸಿದಾಗ ಆಸಿಡ್ ರಿಫ್ಲಕ್ಸ್ ಅಥವಾ ಅಜೀರ್ಣದ ಅಪಾಯವನ್ನು ಹೆಚ್ಚಿಸಬಹುದು.
ಮೊಸರು ತಿಂದ ಕೂಡಲೇ ಹಾಲು ಸೇವನೆ ಬೇಡ
ಹಾಲಿನಿಂದಲೇ ಮೊಸರು ಮಾಡುವುದಾದರೂ ಹಾಲು ಹಾಗೂ ಮೊಸರನ್ನು ಜೊತೆಗೆ ತೆಗೆದುಕೊಳ್ಳಬೇಡಿ. ಹಾಲು ಮೊಸರು ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಸಿಡಿಟಿ, ವಾಂತಿ ಮುಂತಾದ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಹಾಲು ಸೇವಿಸಿ ಕನಿಷ್ಠ ಎರಡು ಗಂಟೆಗಳಾದ ಬಳಿಕ ಮೊಸರನ್ನು ಸೇವಿಸಿ. ಮೊಸರು ತಿಂದು ಹಾಲು ಕುಡಿದರೆ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ದೇಹವು ಹಾಲಿನ ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮೊಸರು ತಿಂದ ಕೂಡಲೇ ಹಾಲು ಸೇವನೆ ಬೇಡವೇ ಬೇಡ.
ಉದ್ದಿನಿಂದ ತಯಾರಿಸಿದ ತಿಂಡಿಗಳನ್ನು ತಿಂದ ಬಳಿಕ ಹಾಲು ಕುಡಿಯಬಾರದು
ಉದ್ದಿನ ಬೇಳೆಯಿಂದ ಮಾಡಿದ ತಿಂಡಿಗಳನ್ನು ತಿಂದ ನಂತರವೂ ಹಾಲು ಸೇವಿಸಬಾರದು. ಉದ್ದಿನ ಬೇಳೆ ಉಪಯೋಗಿಸಿ, ಮಾಡಿದ ತಿಂಡಿಯನ್ನು ತಿಂದ ಕೂಡಲೇ ಹಾಲು ಕುಡಿದರೆ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಹೀಗಾಗಿ ಕೂಡಲೇ ಹಾಲು ಕುಡಿಯಬಾರದು. ಹುಳಿ ವಸ್ತುಗಳನ್ನು ಅಥವಾ ಹುಳಿ ಹಣ್ಣುಗಳನ್ನು ಸೇವಿಸಿದ ನಂತರವೂ ಹಾಲು ಕುಡಿಯುವುದು ಒಳ್ಳೆಯದಲ್ಲ.
ಮೊಟ್ಟೆ, ಮಾಂಸ ಮತ್ತು ಮೀನು
ಎಲ್ಲಕ್ಕಿಂತ ಮುಖ್ಯವಾಗಿ ಮಾಂಸಾಹಾರದ ಜತೆಗೆ, ಮೊಟ್ಟೆ, ಮಾಂಸ ಮತ್ತು ಮೀನು ಸೇವನೆಯ ನಂತರ ಹಾಲು ಕುಡಿಯಬಾರದು. ಇದು ತೂಕ ಹೆಚ್ಚಳ ಹಾಗೂ ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ಮೀನು ತಿಂದ ಬಳಿಕ ಹಾಲು ಕುಡಿದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.