ಬೆಂಗಳೂರು:- ಅಂಧಕಾರವ ಕಳೆದು ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀಪಗಳ ಹಬ್ಬವನ್ನು ಸ್ವಾಗತಿಸಲು ನಗರದ ಮಾರುಕಟ್ಟೆಯಲ್ಲಿ ಬಗೆಬಗೆಯ ಹಣತೆಗಳು ಬಂದಿವೆ. ಮಣ್ಣಿನ ದೀಪಗಳು ದುಬಾರಿ ಎನಿಸಿದರೂ ಪರಿಸರ ಸ್ನೇಹಿ ದೀಪಗಳಾಗಿರುವುದರಿಂದ ಬೇಡಿಕೆ ಹೆಚ್ಚಿದೆ. ನಗರದಲ್ಲಿ ಜೇಡಿ ಮಣ್ಣಿನಿಂದ ಹೂವು, ಆನೆಯ ಮಾದರಿಯ ದೀಪ, ನವಿಲುಗರಿ ಮತ್ತು ಮಹಿಳಾ ಪ್ರತಿರೂಪದ ದೀಪ ಸೇರಿದಂತೆ ಬಣ್ಣ ಬಣ್ಣದ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಮಲ್ಲೇಶ್ವರ, ರಾಜಾಜಿನಗರ, ಜೆಪಿ ನಗರ, ವಸಂತನಗರ, ಶಿವಾಜಿನಗರ, ಶೇಷಾದ್ರಿಪುರ ಸೇರಿದಂತೆ ವಿವಿಧೆಡೆ ದೀಪಗಳ ಖರೀದಿ ಭರದಿಂದ ಸಾಗಿದೆ. ಮಣ್ಣಿನ ಹಣತೆ, ಮಡಿಕೆ, ಹೂಕುಂಡ ಮನೆಯ ಅಲಂಕಾರಿಕ ವಸ್ತುಗಳನ್ನು ಜನರು ಖರೀದಿಸುತ್ತಿದ್ದಾರೆ. ಬಣ್ಣ, ಆಕೃತಿ, ಗಾತ್ರಕ್ಕನುಗುಣವಾಗಿ ಒಂದು ಹಣತೆಗೆ 10 ರೂ. ಗಳಿಂದ 250 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ
ಪರಿಸರಸ್ನೇಹಿ ಮಣ್ಣಿನಿಂದ ತಯಾರಿಸಲಾದ ಹಣತೆಗಳಿಗೆ ಈ ಬಾರಿ ಬಹುಬೇಡಿಕೆಯಿದೆ.ಪಟಾಕಿಗಳನ್ನು ಬದಿಗಿಟ್ಟು ಈ ಬಾರಿ ಪರಿಸರ ಮಾಲಿನ್ಯಗೊಳಿಸದೇ ಹೆಚ್ಚು ಹಣತೆಗಳನ್ನು ಕೊಂಡು ದೀಪ ಹಚ್ಚಿ ಸಂಭ್ರಮಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದು ರಾಜ್ಯ ಕುಂಬಾರರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಶೆಟ್ಟಿ ತಿಳಿಸಿದ್ದಾರೆ.
ತಲೆತಲಾಂತರದಿಂದ ಇದನ್ನೇ ವೃತ್ತಿ ಜೀವನವನ್ನಾಗಿ ಜೀವನ ಸಾಗಿಸುತ್ತಿದ್ದೇವೆ. ಜೇಡಿ ಮಣ್ಣು ಕರ್ನಾಟಕದಲ್ಲಿ ಸಾಕಷ್ಟು ದೊರಕದ ಕಾರಣ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಮಣ್ಣಿನ ವಸ್ತುಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದರೂ, ನಮ್ಮ ಸಮುದಾಯದಲ್ಲಿ ಜನಪ್ರತಿನಿಧಿಗಳ ಕೊರತೆಯಿಂದಾಗಿ ಸೂಕ್ತ ಮಾರುಕಟ್ಟೆ ಕಲ್ಪಿಸಲು ನಮ್ಮ ಕೆಲ ಅಹವಾಲನ್ನು ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.