ಬೆಂಗಳೂರು:– ಬಲಿಪಾಡ್ಯಮಿಯೊಂದಿಗೆ ದೀಪಾವಳಿ ಸಂಪನ್ನಗೊಂಢಿದೆ. ನಗರದಲ್ಲಿ ನಿನ್ನೆ ಅದ್ಧೂರಿಯಾಗಿ ಬಲಿಪಾಡ್ಯಮಿ ಹಬ್ಬ ನೆರವೇರಿತು. ಮನೆಯಲ್ಲಿ ಪೂಜೆ-ಪುನಸ್ಕಾರಗಳ ನಂತರ ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.
ಮಹಿಳೆಯರು ಮನೆಯೆದುರು ಸಾಲುಸಾಲು ದೀಪಗಳನ್ನು ಬೆಳಗಿದರು. ಮಕ್ಕಳು ಪಟಾಕಿ ಸಿಡಿಸಿ ಖುಷಿಪಟ್ಟರು. ಸಾರ್ವಜನಿಕರು ಬಹುತೇಕ ಹಸಿರು ಪಟಾಕಿಗಳನ್ನು ಸಿಡಿಸುತ್ತಿದ್ದರು.
ಮಲ್ಲೇಶ್ವರದ ಲಕ್ಷ್ಮೀ ನರಸಿಂಹ ದೇವಸ್ಥಾನ, ಬನಶಂಕರಿ ದೇವಸ್ಥಾನ, ವೆಂಕಟೇಶ್ವರ ದೇವಾಲಯ, ಕುಮಾರಪಾರ್ಕ್ ವೆಸ್ಟ್ನಲ್ಲಿನ ಮಹಾಲಕ್ಷ್ಮೀ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಬನಶಂಕರಿ ದೇವಾಲಯದಲ್ಲಿ ಗೋಪೂಜೆ ನೆರವೇರಿತು. ದೇಗುಲದ ಸುತ್ತ ಹಣತೆಗಳನ್ನು ಬೆಳಗಿದ್ದು ಆಕರ್ಷಣೀಯವಾಗಿತ್ತು.
ದೀಪಾವಳಿ ವಿದ್ಯೆ, ವಿನಯ, ವಿವೇಕದ ದಾರಿಯಲ್ಲಿ ಮುನ್ನಡೆಸುವ ಹಬ್ಬ. ಬೆಳಕಿನ ಎಚ್ಚರ ತೊಡಿಸುವ, ಭಕ್ತಿಯ ಮಾರ್ಗ ತೋರುವ, ಜ್ಞಾನಿಗಳನ್ನು ಕೊಡುವ, ಬಲಿಯಂತೆ ದಾನ ನೀಡುವ, ದೇವಗಾಂಧಾರ ಹಾಡುವ ಹಿರಿಯ ಹಬ್ಬ. ಕತ್ತಲು ಮರೆಯುವ, ಹೊಸ ಇತಿಹಾಸ ಬರೆಯುವ, ಸಜ್ಜನರೆಡೆಗೆ ಸರಿಯುವ ಸಡಗರದ ಹಬ್ಬ. ಅಜ್ಞಾನದ ಅಂದಕಾರ ಕಳೆದು ಸುಜ್ಞಾನದ ಬೆಳಕು ನೀಡುವ, ಹಣತೆಗಳನ್ನು ಹಚ್ಚಿ ಬೆಳಗುವ ಬೆಳಕಿನ ಹಬ್ಬ. ಪ್ರಜ್ವಲಿಸುವ ಬೆಳಕಿನ ಸೆಲೆ, ಒಳಮನಸ್ಸಿನ ಕೊಳೆ ತೆಗೆಯುವಂತೆ ಪ್ರೇರೇಪಿಸುವ ಬೆಳಕಿನ ಹಬ್ಬ. ಬೆಳಕು ಬಂತೆಂದರೆ ಜ್ಞಾನ ಬಂದಂತೆ. ಅರಿವು ಮೂಡಿದಂತೆ. ಜಡತ್ವ ನಿವಾರಿಸಿ ಚೈತನ್ಯದ ಬುಗ್ಗೆ, ಸದ್ಭಾವನೆ ಹೊಮ್ಮಿಸುವ ಬೆಳಕಿನ ಹಬ್ಬ ಎನ್ನುತ್ತಾರೆ ಹಿರಿಯರು.
ದೀಪಾವಳಿಯ ಮಾರನೇ ದಿನವೇ ಬಲಿಪಾಡ್ಯಮಿ. ವಿಷ್ಣು ವಾಮನಾವತಾರ ತಾಳಿ ದಾನಪಡೆಯಲು ಬಲಿ ಚಕ್ರವರ್ತಿಯ ಬಳಿಗೆ ಬಂದ. ವಾಮನ ಅವತಾರಿ ಭಗವಂತ, ಬಲಿ ಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಜಾಗ ಬೇಡಿದ. ಆಗ ಭಗವಂತನು ಆಕಾಶ, ಭೂಮಿಯನ್ನು ತನ್ನ ಎರಡು ಹೆಜ್ಜೆಗಳಿಂದ ಅಳೆದುಕೊಂಡು ಮೂರನೇ ಹೆಜ್ಜೆಯನ್ನು ಇಡಲು ಸ್ಥಳವೆಲ್ಲಿ ಎಂದಾಗ, ಬಲಿ ಚಕ್ರವರ್ತಿಯು ತನ್ನ ತಲೆಯ ಮೇಲಿಡುವಂತೆ ಸೂಚಿಸಿದಾಗ, ಮೂರನೇ ಪುಣ್ಯಪಾದವನ್ನು ಬಲಿಯ ತಲೆಯ ಮೇಲಿಡುತ್ತಾನೆ. ಬಲಿಯ ಭಕ್ತಿಯನ್ನು ಕಂಡು ವಾಮನ ಅವನನ್ನು ಪಾತಾಳ ಲೋಕದಲ್ಲಿರಿಸಿ, ವರ್ಷಕಕ್ಕೆ ಒಂದು ದಿನ ಭೂಮಿಯಲ್ಲಿ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ದಿನವೇ ಬಲಿಪಾಡ್ಯಮಿ