ಬೆಂಗಳೂರು:– ಲಂಚ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು, ಮರು ತನಿಖೆಗೆ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ ನೀಡಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಮುಖ್ಯಮಂತ್ರಿಯಾಗಿದ್ದಾಗ ಲಂಚ ಪಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಈಗ ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಾಗಿಲ್ಲವೆಂದು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, ಮರುತನಿಖೆ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ವಿದ್ಯಮಾನ ನಡೆದಿರುವುದು ರಾಜಕೀಯವಾಗಿ ಪ್ರತಿಪಕ್ಷ ಬಿಜೆಪಿಗೆ ಪ್ರಮುಖ ಅಸ್ತ್ರವಾಗುವ ಎಲ್ಲ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್ಆರ್ ರಮೇಶ್ ಖಾಸಗಿ ದೂರು ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ ಹುದ್ದೆಯೊಂದಕ್ಕೆ ನೇಮಕ ಮಾಡಲು ವ್ಯಕ್ತಿಯೊಬ್ಬರಿಂದ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.