ಬೆಳಗಾವಿ:- ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಧಿವೇಶನದ ವೇಳೆ ಚರ್ಚೆ ಮಾಡಲಾಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಸೆಂಬರ್ 4ರಿಂದ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ರಾಜ್ಯಮಟ್ಟದ ನಾಯಕರೆಲ್ಲ ಬೆಳಗಾವಿಯಲ್ಲೇ ಹಾಜರಿರುತ್ತಾರೆ. ಆಗ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವ ಸಂಬಂಧ ಚರ್ಚಿಸಲಾಗುವುದು.
2024ರ ಜನವರಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದರೆ, ಅವರೂ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿ ಮತ್ತು ಚಿಕ್ಕೋಡಿಯಿಂದ ಕುರುಬ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದೇವೆ. ಟಿಕೆಟ್ ಪಡೆಯಲು ಇಚ್ಛಿಸುವ ಅಭ್ಯರ್ಥಿ ತಮ್ಮ ಸಮುದಾಯದಲ್ಲಿ ಜನಪ್ರಿಯತೆ ಗಳಿಸಬೇಕು. ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವನ್ನೂ ಹೊಂದಿರಬೇಕು. ಈ ಅಂಶಗಳನ್ನು ಆಧರಿಸಿ ಟಿಕೆಟ್ ಕೊಡುತ್ತೇವೆ. ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳನ್ನು ಘೋಷಿಸಲಿದೆ’ ಎಂದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸುತ್ತೇವೆ. ಬೇರೆ ರಾಜಕೀಯ ಪಕ್ಷಗಳಲ್ಲಿ ಇದ್ದವರು, ಕಾಂಗ್ರೆಸ್ ಸೇರಲು ಬಯಸುವವರು ಸೇರಿದಂತೆ ಯಾರಾದರೂ ಅರ್ಜಿ ಸಲ್ಲಿಸಬಹುದು. ಸದ್ಯ ಕಾಂಗ್ರೆಸ್ ಮುಖಂಡ ಕಿರಣ ಸಾಧುನವರ ಬೆಳಗಾವಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ’ ಎಂದ ಅವರು, ‘ನನ್ನ ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಮೃಣಾಲ್ ಹೆಬ್ಬಾಳಕರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ನನ್ನೊಂದಿಗೆ ಯಾರೂ ಮಾತನಾಡಿಲ್ಲ’ ಎಂದು ತಿಳಿಸಿದರು.